Country
Trending

ಅಮರನಾಥ ಯಾತ್ರೆ ಮಾರ್ಗವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಣೆ

ಜಮ್ಮು ಮತ್ತು ಕಾಶ್ಮೀರ(Jammu and Kashmir)ದಲ್ಲಿ ವಾರ್ಷಿಕ ಅಮರನಾಥ ಯಾತ್ರೆ(Amarnath Yatra) ಆರಂಭವಾಗಲಿದೆ. ಈ ಯಾತ್ರೆ ಮಾರ್ಗವನ್ನು ಜುಲೈ 1 ರಿಂದ ಆಗಸ್ಟ್​ 10ರವರೆಗೆ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.ಈ ಬಾರಿ ಅಮರನಾಥ ಯಾತ್ರೆಗೆ ಭದ್ರತಾ ವ್ಯವಸ್ಥೆಯನ್ನು ತೀರಾ ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಯಾತ್ರೆಯ ಸಮಯದಲ್ಲಿ ಆಗುವ ಯಾವುದೇ ರೀತಿಯ ಭಯೋತ್ಪಾದಕ ಬೆದರಿಕೆಯನ್ನು ತಡೆಯುವ ಉದ್ದೇಶದಿಂದ ಈ ಯಾತ್ರಾ ಮಾರ್ಗವನ್ನು ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.

ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಗುಪ್ತಚರ ಸಂಸ್ಥೆಗಳಿಂದ ಬಂದ ಭಯೋತ್ಪಾದಕ ದಾಳಿಯ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ದೇಶದ ವಿವಿಧ ಭದ್ರತಾ ಸಂಸ್ಥೆಗಳು ಯಾತ್ರೆಯ ಭದ್ರತೆಗಾಗಿ ವ್ಯಾಪಕ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಈ ಹಿನ್ನೆಲೆಯಲ್ಲಿ, ಇಂದು ಮಂಗಳವಾರ ಶ್ರೀನಗರದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಕರೆಯಲಾಗಿತ್ತು. ಇದರಲ್ಲಿ ದೇಶದ ಪ್ರಮುಖ ಭದ್ರತಾ ಸಂಸ್ಥೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕ ನಳಿನ್ ಪ್ರಭಾತ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿಪಿ ದಲ್ಜಿತ್ ಸಿಂಗ್ ಚೌಧರಿ, ಬಿಎಸ್‌ಎಫ್ ಡಿಜಿ ಸದಾನಂದ ದಿನಾಂಕೆ, ಎನ್‌ಐಎ ಡಿಜಿ ಮನೋಜ್ ಯಾದವ್, ಆರ್‌ಪಿಎಫ್ ಡಿಜಿ, ಐಟಿಬಿಪಿ ಉತ್ತರ ಗಡಿನಾಡು ಐಜಿಪಿ, ಚಿನಾರ್ ಕಾರ್ಪ್ಸ್ ಜಿಒಸಿ ಲೆಫ್ಟಿನೆಂಟ್ ಜನರಲ್ ಪ್ರಶಾಂತ್ ಶ್ರೀವಾಸ್ತವ ಮತ್ತು ಭಾರತೀಯ ಸೇನೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ, ಯಾತ್ರಾ ಮಾರ್ಗದ ಭದ್ರತೆ, ಸಂಭವನೀಯ ಭಯೋತ್ಪಾದಕ ಬೆದರಿಕೆಗಳು, ಗುಪ್ತಚರ ಮಾಹಿತಿಯ ಪರಿಶೀಲನೆ ಮತ್ತು ಹೊಸ ಭದ್ರತಾ ಕ್ರಮಗಳ ಕುರಿತು ವಿವರವಾದ ಚರ್ಚೆಗಳು ನಡೆದವು. ಭದ್ರತಾ ಸಂಸ್ಥೆಗಳು ವಿಶೇಷ ಪಡೆಗಳ ನಿಯೋಜನೆ, ತಾಂತ್ರಿಕ ಕಣ್ಗಾವಲು, ಡ್ರೋನ್ ಕಣ್ಗಾವಲು, ಅನುಮಾನಾಸ್ಪದ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ದಿನನಿತ್ಯದ ಶೋಧ ಕಾರ್ಯಾಚರಣೆಗಳಿಗೆ ಯೋಜನೆಯನ್ನು ಸಿದ್ಧಪಡಿಸಿವೆ. ಅಲ್ಲದೆ, ಯಾತ್ರಾ ಮಾರ್ಗವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಲು ಒಪ್ಪಿಗೆ ನೀಡಲಾಯಿತು.ಇದರರ್ಥ ಈ ಸಮಯದಲ್ಲಿ ಯಾವುದೇ ಸರ್ಕಾರೇತರ ಡ್ರೋನ್, ವಿಮಾನಗಳು, ಹೆಲಿಕಾಪ್ಟರ್​​ಗಳು ಈ ಪ್ರದೇಶದಲ್ಲಿ ಹಾರಲು ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದರೆ ತಕ್ಷಣ ಕಣ್ಣಿಗೆ ಬೀಳುತ್ತವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗಾಗಿ 42,000 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನೊಳಗೊಂಡ 580 ತುಕಡಿಗಳ ನಿಯೋಜನೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. 580 ತುಕಡಿಗಳ ಪೈಕಿ 424 ತುಕಡಿಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಅಮರನಾಥ ಯಾತ್ರೆಯು ಜುಲೈ 3 ರಂದು ಪ್ರಾರಂಭವಾಗಿ ಆಗಸ್ಟ್ 9 ರಂದು ಕೊನೆಗೊಳ್ಳಲಿದೆ.ಏಪ್ರಿಲ್ 22 ರ ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಜನರು, ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಬಾರಿಯ ಅಮರನಾಥ ಯಾತ್ರೆಗೆ ಸುಮಾರು 580 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ನಿಯೋಜಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

Related Articles

Leave a Reply

Your email address will not be published. Required fields are marked *

Back to top button