
ಹೊಸ ದಿಲ್ಲಿ: 2025-2026 ರ ವೇಳೆಗೆ ಭಾರತಕ್ಕೆ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಉಳಿದ ಎರಡು ಘಟಕಗಳನ್ನು ನೀಡುವುದಾಗಿ ರಷ್ಯಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ಒಪ್ಪಂದದ ಪ್ರಕಾರ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.ರಷ್ಯಾದಿಂದ ಖರೀದಿಸಿದ ಎಸ್-400 ವಾಯು ರಕ್ಷಣಾ ವ್ಯವಸ್ಥೆಗೆ ಹಿಂದೂ ಪುರಾಣಗಳಿಂದ ಸ್ಫೂರ್ತಿ ಪಡೆದು ಸುದರ್ಶನ ಚಕ್ರ ಎಂದು ಹೆಸರಿಡಲಾಗಿದೆ.
“ಆಪರೇಷನ್ ಸಿಂಧೂರ್” ಸಮಯದಲ್ಲಿ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂದು ತಿಳಿದುಬಂದಿದೆ. ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಸಹಕಾರವು ವೃದ್ಧಿಯಾಗಲಿದೆ. ರಷ್ಯಾ-ಭಾರತ ರಕ್ಷಣಾ ಸಹಕಾರಕ್ಕೆ ದೀರ್ಘ ಇತಿಹಾಸವಿದೆ. ವಾಯು ರಕ್ಷಣಾ ವ್ಯವಸ್ಥೆಗಳು ನಮ್ಮ ಪಾಲುದಾರಿಕೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ ಎಂದು ಭಾರತದಲ್ಲಿರುವ ರಷ್ಯಾದ ಮಿಷನ್‌ನ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ.ವೈಮಾನಿಕ ದಾಳಿ ಎದುರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಎಸ್–400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ಐದು ಘಟಕಗಳಿಗೆ 2018ರಲ್ಲಿ ಭಾರತವು ರಷ್ಯಾ ಜತೆ 5.43 ಬಿಲಿಯನ್ ಡಾಲರ್(35 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದ) ಮೌಲ್ಯದ ಒಪ್ಪಂದವನ್ನು ಮಾಡಿಕೊಂಡಿತ್ತು. ಅದಂತರ ಈಗಾಗಲೇ ಮೂರು ಘಟಕಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ಎರಡು ಎಸ್-400 ಘಟಕಗಳ ಹಸ್ತಾಂತರ ಪ್ರಕ್ರಿಯೆ ಒಪ್ಪಂದಕ್ಕೆ ಅನುಗುಣವಾಗಿ 2025-26ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಡ್ರೋನ್ ದಾಳಿಗಳನ್ನು ಎದುರಿಸುವ ರಷ್ಯಾದ ಅನುಭವದ ಬಗ್ಗೆ ಮಾತನಾಡಿದ ಅವರು, ರಷ್ಯಾದ ರಕ್ಷಣಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ನಾವು ಹಲವಾರು ವರ್ಷಗಳಿಂದ ನಮ್ಮ ವ್ಯವಸ್ಥೆಗಳನ್ನು ನಿರಂತರವಾಗಿ ಆಧುನೀಕರಿಸುವತ್ತ ಹೆಜ್ಜೆ ಇಡುತ್ತಿದ್ದೇವೆ. ರಷ್ಯಾದಿಂದ ಎಸ್-400 ಖರೀದಿಸಿದರೆ ಭಾರತದ ಮೇಲೆ ಕೆಲ ನಿರ್ಬಂಧ ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿತ್ತು. ಆದರೆ, ಭಾರತವು ರಷ್ಯಾದೊಂದಿಗೆ ವ್ಯವಹರಿಸುವ ಮೂಲಕ ಅಮೆರಿಕದ ಬೆದರಿಕೆಯನ್ನು ಧಿಕ್ಕರಿಸಿತ್ತು.” ಎಂದರು.
ರಷ್ಯಾದ ಅಲ್ಮಾಜ್-ಆಂಟೆ ಅಭಿವೃದ್ಧಿಪಡಿಸಿದ ಎಸ್–400 ಟ್ರಯಂಫ್, ವಿಶ್ವದ ಅತ್ಯಾಧುನಿಕ ದೂರಗಾಮಿ ಮೇಲ್ಮೈಯಿಂದ ವಾಯು ಕ್ಷಿಪಣಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು 600 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿಲೋ ಮೀಟರ್‌ಗಳವರೆಗಿನ ಗುರಿಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ.. ಇದು ವಿಮಾನ, ಡ್ರೋನ್, ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ ಹೊಡೆದುರುಳಿಸುತ್ತದೆ.
ರಷ್ಯಾದಿಂದ ಖರೀದಿಸಿದ ಎಸ್-400 ವಾಯು ರಕ್ಷಣಾ ವ್ಯವಸ್ಥೆಗೆ ಹಿಂದೂ ಪುರಾಣಗಳಿಂದ ಸ್ಫೂರ್ತಿ ಪಡೆದು ಸುದರ್ಶನ ಚಕ್ರ ಎಂದು ಹೆಸರಿಡಲಾಗಿದೆ. ವಿಷ್ಣು ಬಳಸುವ ಸುದರ್ಶನ ಚಕ್ರ ಪ್ರಬಲ ಆಯುಧವಾಗಿದೆ. ಅದೇ ರೀತಿ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತದ ರಕ್ಷಣಾ ಶಸ್ತ್ರಾಗಾರದಲ್ಲಿ ಪ್ರಬಲ ಸಾಧನವಾಗಿದೆ. ಆದ್ದರಿಂದ ಸುದರ್ಶನ ಚಕ್ರ ಎಂದು ಇದಕ್ಕೆ ಹೆಸರಿಡಲಾಗಿದೆ. ಇದನ್ನು ರಷ್ಯಾ ತಯಾರಿಸಿದೆ.