ಇತ್ತೀಚಿನ ಸುದ್ದಿ
Trending

ದೆಹಲಿಯ 5 ಶಾಲೆಗಳಿಗೆ ಬಾಂಬ್​ ಬೆದರಿಕೆ ಕರೆ; ಮೂರು ದಿನಗಳಲ್ಲಿ 10ನೇ ಪ್ರಕರಣ!

ದೆಹಲಿಯ ಖಾಸಗಿ ಶಾಲೆಗಳಿಗೆ ನಿರಂತರ ಬಾಂಬ್​ ಬೆದರಿಕೆ ಕರೆಗಳು ಮುಂದುವರೆದಿದೆ. ಇಂದು ಕೂಡ ರಾಷ್ಟ್ರ ರಾಜಧಾನಿಯಲ್ಲಿನ ಐದು ಖಾಸಗಿ ಶಾಲೆಗಳಿಗೆ ಬಾಂಬ್​ ಬೆದರಿಕೆ ಕರೆಯ ಇಮೇಲ್​ ಸಂದೇಶ ರವಾನೆಯಾಗಿದ್ದು, ತಕ್ಷಣಕ್ಕೆ ಶಾಲಾ ಆಡಳಿತ ಮಂಡಳಿಯವರು ಕ್ರಮಕ್ಕೆ ಮುಂದಾಗಿದ್ದಾರೆ.ಕಳೆದೆರಡು ದಿನಗಳಿಂದ ಅನೇಕ ಶಾಲೆಗಳಿಗೆ ಇದೇ ರೀತಿಯ ಐದು ಬಾಂಬ್​ ಬೆದರಿಕೆ ಕರೆಗಳು ಬಂದಿವೆ. ಇವು ಹುಸಿ ಬಾಂಬ್​ ಸಂದೇಶವಾಗಿದೆ. ಈ ಸಂಬಂಧ ಒಟ್ಟೂ 10 ಪ್ರಕರಣಗಳು ದಾಖಲಾಗಿವೆ. ರಕ್ಷಣಾ ಸಿಬ್ಬಂದಿಯು ವಿದ್ಯಾರ್ಥಿಗಳು, ಸಿಬ್ಬಂದಿಯನ್ನು ಶಾಲಾ ಆವರಣದಿಂದ ಹೊರಗೆ ಕಳುಹಿಸಿ, ಬಾಂಬ್​ ಪತ್ತೆ ಕಾರ್ಯ ನಡೆಸಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಬೆದರಿಕೆ ಸಂದೇಶ ಬಂದ ಶಾಲೆಗಳು: ದ್ವಾರಕಾದ ಸೇಂಟ್ ಥಾಮಸ್ ಶಾಲೆಯನ್ನು ಸ್ಫೋಟಿಸುವುದಾಗಿ ಬೆಳಗ್ಗೆ 5.26ಕ್ಕೆ ಹಾಗೂ ಸೇಂಟ್ ಕುಂಜ್‌ನ ವಸಂತ್ ವ್ಯಾಲಿ ಶಾಲೆಗೆ ಬೆಳಗ್ಗೆ 6.30ಕ್ಕೆ, ಹೌಜ್ ಖಾಸ್‌ನಲ್ಲಿರುವ ಮದರ್ ಇಂಟರ್‌ನ್ಯಾಷನಲ್‌ ಸ್ಕೂಲ್​​ಗೆ ಬೆಳಗ್ಗೆ 8.12ಕ್ಕೆ ಹಾಗೂ ಪಶ್ಚಿಮ ವಿಹಾರ್‌ನಲ್ಲಿರುವ ರಿಚ್‌ಮಂಡ್ ಗ್ಲೋಬಲ್ ಶಾಲೆಗೆ ಬೆಳಗ್ಗೆ 8.11ಕ್ಕೆ ಬಾಂಬ್​ ಬೆದರಿಕೆ ಸಂದೇಶಗಳು ಬಂದಿವೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ಮಾಹಿತಿ ನೀಡಿದ್ದಾರೆ.ಲೋಧಿ ಎಸ್ಟೇಟ್‌ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯಕ್ಕೂ ಬೆದರಿಕೆ ಇಮೇಲ್ ಬಂದಿದ್ದು, ಶಾಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕ್ಕಳು ಮನೆಗೆ ವಾಪಸ್​: ಸೇಂಟ್​ ಥಾಮಸ್​ ಶಾಲೆಗೆ ಕಳೆದ 24 ಗಂಟೆಯಲ್ಲಿ ಎರಡನೇ ಬಾಂಬ್​ ಬೆದರಿಕೆ ಕರೆ ಬಂದಿದೆ. ಇದೇ ರೀತಿಯಲ್ಲಿ ಒಟ್ಟು 10 ಶಾಲೆಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವಂತೆ ಪೋಷಕರಿಗೆ ಆಡಳಿತ ಮಂಡಳಿ ತಿಳಿಸಿದೆ.ಬೆದರಿಕೆ ಕರೆ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಲ್ಲಿ ರಾತ್ರಿಯಿಡೀ ತಂಗಿದ್ದ ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಮಾಹಿತಿ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸ್, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಸೈಬರ್ ತಜ್ಞರ ತಂಡಗಳು ಸ್ಥಳಕ್ಕೆ ದೌಡಾಯಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇದುವರೆಗೆ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button