ನನ್ ಹೆಂಡ್ತಿಯಿಂದ ನನ್ನನ್ನು ರಕ್ಷಿಸಿ ಸರ್; ಪತ್ನಿಯ ಹಲ್ಲೆ, ಕಿರುಕುಳದಿಂದ ಬೇಸತ್ತು ಕಂಪ್ಲೇಂಟ್ ಕೊಟ್ಟ ಗಂಡ

ಮಧ್ಯಪ್ರದೇಶ, ಏ. 02: ಹಿಂದೆಲ್ಲಾ ಗಂಡ (husband) ಹೆಂಡತಿಯ (wife) ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡಂದಿರ, ಪುರುಷರ ಮೇಲಾಗುವ ದೌರ್ಜನ್ಯ(violence), ಮನಸಿಕ ಕಿರುಕುಳದ (harassment) ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಒಂದಷ್ಟು ಸಮಯಗಳ ಹಿಂದೆ ಟೆಕ್ಕಿ ಅತುಲ್ ಸುಭಾಷ್ (Atul Subhash) ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಯೊಂದು ನಡೆದಿತ್ತು. ಮಧ್ಯ ಪ್ರದೇಶದಲ್ಲಿ (Madhya Pradesh) ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಚಿನ್ನ, ಹಣಕ್ಕೆ ಬೇಡಿಕೆಯಿಟ್ಟು ಮಹಿಳೆಯೊಬ್ಬಳು ತನ್ನ ತಾಯಿ ಹಾಗೂ ಸಹೋದರನೊಂದಿಗೆ ಸೇರಿ ತನ್ನ ಗಂಡನ ಮೇಲೆಯೇ ಹಲ್ಲೆ ನಡೆಸಿದ್ದಾಳೆ. ಹೆಂಡತಿಯ ಕ್ರೌರ್ಯದ ಈ ದೃಶ್ಯವನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಬಳಿಕ ಕಂಪ್ಲೇಂಟ್ ಕೊಟ್ಟು ದಯವಿಟ್ಟು ನನ್ ಹೆಂಡ್ತಿಯಿಂದ ನನ್ನನ್ನು ಕಾಪಾಡಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಪನ್ನಾ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಹೋದರ ಹಾಗೂ ತಾಯಿಯ ಜೊತೆ ಸೇರಿ ಮಹಿಳೆಯೊಬ್ಬಳು ಚಿನ್ನಾಭರಣ ಹಾಗೂ ಹಣ ಕೊಡುವಂತೆ ಒತ್ತಾಯಿಸಿ ತನ್ನ ಗಂಡನ ಮೇಲೆಯೇ ದೈಹಿಕ ಹಲ್ಲೆ ನಡೆಸಿದ್ದಾಳೆ. ಅಷ್ಟೇ ಅಲ್ಲದೆ ಗಂಡನಿಗೆ ಮಾನಸಿಕ ಹಿಂಸೆಯನ್ನು ಕೂಡ ನೀಡಿದ್ದಾಳೆ. ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ ಪತಿರಾಯ ದಯವಿಟ್ಟು ನನಗೆ ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ. ಲೊಕೇಶ್ ಎಂಬಾತನಿಗೆ ಆತನ ಪತ್ನಿ ಹರ್ಷಿತಾ ಹಲ್ಲೆ ನಡೆಸಿದ್ದು, ಈ ದೃಶ್ಯವನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಳಿಕ ಪೊಲೀಸ್ ಠಾಣೆಗೆ ಹೋಗಿ ನನಗೆ ರಕ್ಷಣೆ ಕೊಡಿ ಎಂದು ಲೊಕೇಶ್ ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.