ಇತ್ತೀಚಿನ ಸುದ್ದಿ
Trending

ಬೆಂಗಳೂರಲ್ಲಿ ಖಾಸಗಿ ಟ್ಯಾಂಕರ್‌ಗಳಿಂದ ದುಪ್ಪಟ್ಟು ಹಣ ವಸೂಲಿ

ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆ ಶುರುವಾಗುತ್ತಿದ್ದಂತೆ ಖಾಸಗಿ ಟ್ಯಾಂಕರ್‌ಗಳ ಹಾವಳಿ ಶುರುವಾಗಿದ್ದು, ಮಾಲೀಕರು ನೀರಿಗೆ ದುಪ್ಪಟ್ಟು ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಮತ್ತು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕೈಚೆಲ್ಲಿದ್ದಾರೆ.ಪ್ರತಿ ವರ್ಷ ಬೇಸಿಗೆಯಲ್ಲೂ ನಗರದಲ್ಲಿ ಸಾಕಷ್ಟು ಜನರು ನೀರಿಗಾಗಿ ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುವುದು ಸಾಮಾನ್ಯವಾಗಿದೆ. ಆದರೆ, ಕಳೆದ ವರ್ಷ ಉದ್ಭವಿಸಿದ ತೀವ್ರ ನೀರಿನ ಅಭಾವದ ಪರಿಣಾಮ, ಟ್ಯಾಂಕರ್‌ ಮಾಲೀಕರು ತಮ್ಮ ಇಚ್ಛಾನುಸಾರ ಹಣ ವಸೂಲಿ ಮಾಡುತ್ತಿದ್ದರು. ಇದರಿಂದ ಕಂಗಾಲಾದ ಜನರು, ನಗರದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ನೀರಿನ ದರ ನಿಗದಿಪಡಿಸಿತ್ತು. ಈ ಬೇಸಿಗೆಯಲ್ಲೂ ಅದೇ ದರ ಮುಂದುವರಿಸಬೇಕಿದ್ದರೂ, ನಗರದ ಹಲವೆಡೆ ಖಾಸಗಿ ಟ್ಯಾಂಕರ್‌ ಮಾಲೀಕರು ಎರಡು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಮಂಜುನಾಥ ನಗರ, ರಾಮಯ್ಯ ಲೇಔಟ್‌, ದಾಸರಹಳ್ಳಿ, ಪೀಣ್ಯ, ಬಾಗಲಗುಂಟೆ ಸುತ್ತಲಿನ ಪ್ರದೇಶಗಳಲ್ಲಿ 6 ಸಾವಿರ ಲೀಟರ್‌ಗೆ 600 ರಿಂದ 700 ರೂ.ಬೆಲೆ ನಿಗದಿ ಮಾಡಿದ್ದರೆ, ಕೆಂಗೇರಿ, ಆರ್‌ಆರ್‌ನಗರ, ನಾಗದೇವನಹಳ್ಳಿ, ಶಿರ್ಕೆ, ಭುವನೇಶ್ವರಿನಗರ (ಕೆಂಚನಪುರ ಕ್ರಾಸ್‌), ಕೆ.ಆರ್‌.ಪುರ, ಕಾಡುಗೋಡಿ ಸುತ್ತಲಿನ ಹಲವು ಪ್ರದೇಶಗಳಲ್ಲಿ 800 ರೂ-1000 ರೂ., 5 ಕಿ.ಮೀ.ಗಿಂತ ದೂರಕ್ಕೆ ನೀರು ಪೂರೈಸಲು 1200-1500ರೂ. ವಸೂಲಿ ಮಾಡಲಾಗುತ್ತಿದೆ.”ನಾವು ನಗರದ ಹೊರವಲಯದಿಂದ ಅಂದರೆ 40-50 ಕಿ.ಮೀ. ದೂರದಿಂದ ನೀರು ತಂದು ಪೂರೈಸುತ್ತೇವೆ. ಸಮೀಪದಲ್ಲಿ ತಂದರೆ ಕಡಿಮೆ ದರದಲ್ಲಿಯೇ ನೀಡುತ್ತೇವೆ,” ಎನ್ನುತ್ತಾರೆ ಖಾಸಗಿ ಟ್ಯಾಂಕರ್‌ಗಳ ನೀರು ಪೂರೈಕೆದಾರರು.

ಜಲಮಂಡಳಿ ಕೂಡ ಟ್ಯಾಂಕರ್‌ ಮೂಲಕ ಶೀಘ್ರ ನೀರು ಸರಬರಾಜು ಮಾಡಲಿದೆ. 6000 ಲೀಟರ್‌ ಕಾವೇರಿ ನೀರಿಗೆ 540 ರೂ.(ಟ್ಯಾಂಕರ್‌ ಬಾಡಿಗೆಯೂ ಸೇರಿ) ನಿಗದಿಪಡಿಸಿದೆ. ನೀರಿನ ಅಗತ್ಯವಿರುವವರು ಆಯಾ ವ್ಯಾಪ್ತಿಯ ಸೇವಾ ಠಾಣೆಗಳಿಗೆ ತೆರಳಿ, ಯಾವ ವಿಳಾಸಕ್ಕೆ, ಎಷ್ಟು ನೀರು ಬೇಕು ಎಂಬುದನ್ನು ತಿಳಿಸಿ, ಹಣ ಪಾವತಿಸಿ ರಶೀದಿ ಪಡೆದರೆ, ಆ ಗ್ರಾಹಕರ ಜತೆಗೆ ನಮ್ಮ ಜಿಎಲ್‌ಆರ್‌ನಿಂದ ಟ್ಯಾಂಕರ್‌ಗೆ ನೀರು ತುಂಬಿಸಿ ಕಳುಹಿಸಿಕೊಡಲಾಗುವುದು. ಯಾವುದೇ ರೀತಿ ತಡವಾಗುವುದಿಲ್ಲ. ಅಲ್ಲದೆ, ಇದನ್ನು ಇನ್ನಷ್ಟು ಸರಳೀಕರಣಗೊಳಿಸಲು ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ ಎನ್ನುತ್ತಾರೆ ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ರೊಬ್ಬರು.

ರಾಜಧಾನಿಯಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಕೊಳವೆಬಾವಿಗಳಿವೆ. ಈ ಪೈಕಿ ಬೇಸಿಗೆಯಲ್ಲಿ ಶೇ.40ರಷ್ಟು ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುವುದು, ನೀರು ಕಡಿಮೆಯಾಗುವುದು ಸಾಧಿಮಾನ್ಯ. ಹೀಗೆ ಅಂತರ್ಜಲದ ಮೇಲೆಯೇ ಅವಲಂಬಿತರಾಗಿರುವ ಸಾಕಷ್ಟು ಜನರು, ಬೇಸಿಗೆಯಲ್ಲಿ ನೀರಿಗಾಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಟ್ಯಾಂಕರ್‌ಗಳ ಮಾಲೀಕರು ಮನಸೋ-ಇಚ್ಛೆ ಹಣ ವಸೂಲಿ ಮಾಡುತ್ತಾರೆ. ಇದನ್ನು ಮನಗಂಡ ಬೆಂಗಳೂರು ಜಲಮಂಡಳಿ ಸುಮಾರು 200 ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದು, ಕಾವೇರಿ ನೀರನ್ನು 540 ರೂ. ದರದಲ್ಲಿ6 ಸಾವಿರ ಲೀಟರ್‌ ಪೂರೈಸಲು ಮುಂದಾಗಿದೆ. ಆದರೂ, ಜನರು ಖಾಸಗಿ ಟ್ಯಾಂಕರ್‌ಗಳಿಂದಲೇ ನೀರು ತರಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಖಾಸಗಿ ಟ್ಯಾಂಕರ್‌ಗಳ ನೀರಿನ ದರ 3 ಸಾವಿರ ರೂ.ಗೂ ಹೆಚ್ಚಿತ್ತು. ಇದರಿಂದ ಬೇಸತ್ತ ಜನರು ನಗರ ಸ್ಥಳೀಯ ಸಂಸ್ಥೆಗಳಿಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕಲು ದರ ನಿಗದಿ ಮಾಡಿತ್ತು. 5 ಕಿ.ಮೀ. ವ್ಯಾಪ್ತಿವರೆಗೆ 6,000 ಲೀಟರ್‌ ನೀರಿನ ಟ್ಯಾಂಕರ್‌ಗೆ 600 ರೂ., 8,000 ಲೀ.ಗೆ 700 ರೂ., 12,000 ಲೀ.ಗೆ 1,000 ರೂ. ಮತ್ತು 5 ರಿಂದ 10 ಕಿಮೀ ವ್ಯಾಪ್ತಿವರೆಗೆ 6000 ಲೀ.ಗೆ 750 ರೂ., 8,000 ಲೀ.ನೀರಿನ ಟ್ಯಾಂಕರ್‌ಗೆ 850 ರೂ., 12,000 ಲೀಟರ್‌ಗೆ 1,200 ರೂ. ನಿಗದಿಪಡಿಸಿ ಆದೇಶಿಸಿತ್ತು. ಈ ಬಾರಿಯೂ ಇದೇ ದರವನ್ನು ಮುಂದುವರಿಸಲಾಗಿದೆ.

ಕಳೆದ ಬಾರಿ ಜಿಲ್ಲಾಡಳಿತ ನಿಗದಿಪಡಿಸಿದ ದರದಲ್ಲಿ ನೀರು ಸರಬರಾಜು ಮಾಡಲು ಸುಮಾರು 1,700ಕ್ಕೂ ಹೆಚ್ಚು ಟ್ಯಾಂಕರ್‌ಗಳು ನೋಂದಾಯಿಸಿಕೊಂಡಿದ್ದವು. ಹೀಗೆ ನೋಂದಾಯಿಸಿಕೊಂಡ ಮಾಲೀಕರ ವಿವರವನ್ನು ಬಿಬಿಎಂಪಿ ಪ್ರಕಟಿಸಿತ್ತು. ಅಲ್ಲದೆ, ಜನರು ಅವುಗಳನ್ನು ಗುರುತಿಸಲಿ ಎಂದು ಸ್ಟಿಕ್ಕರ್‌ ಕೂಡ ಅಂಟಿಸಲಾಗಿತ್ತು. ಬಿಬಿಎಂಪಿ, ಜಲಮಂಡಳಿಯ ಅಧಿಕಾರಿಗಳ ತಂಡ ನಿಗದಿತ ದರದ ಪಾಲನೆಯ ಸಂಬಂಧ ನಿಗಾ ವಹಿಸಿತ್ತು. ಆದರೆ, ಈ ಬಾರಿ ಹೆಚ್ಚು ದರ ವಸೂಲಿ ಮಾಡುವ ಖಾಸಗಿ ಟ್ಯಾಂಕರ್‌ಗಳ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಮತ್ತು ನಿಗಾ ವಹಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೈಚೆಲ್ಲಿದ್ದಾರೆ.”ನಮ್ಮ ಕಚೇರಿಯಲ್ಲಿ ಒಂದು ದಿನ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ 1300 ರೂ. ಪಾವತಿಸಿ ಒಂದು ಟ್ಯಾಂಕರ್‌ ನೀರು ಖರೀದಿಸಲಾಯಿತು. ಈ ಬಾರಿಯೂ ಇಷ್ಟೊಂದು ದರ ನಿಗದಿಯಾಗಿರುವುದನ್ನು ಕೇಳಿ ಆಶ್ಚರ್ಯವಾಯಿತು. ಕಳೆದ ವರ್ಷ ಜಿಲ್ಲಾಡಳಿತ ನಿಗದಿ ಮಾಡಿದ್ದ ದರ ಪಾಲನೆಯಾಗುತ್ತಿಲ್ಲ. ರಾಜಾರೋಷವಾಗಿ ಹೆಚ್ಚಿನ ದರಕ್ಕೆ ನೀರು ಮಾರಾಟ ಮಾಡಲಾಗುತ್ತಿದೆ,” ಎನ್ನುತ್ತಾರೆ ಜೆಪಿ ನಗರದ ಖಾಸಗಿ ಕಂಪನಿ ಉದ್ಯೋಗಿ ಪ್ರಶಾಂತ್‌ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button