ನಗರಸಭೆ
Trending

ಮುಖ್ಯಾಧಿಕಾರಿ ಅಶೋಕ್ ಮತ್ತಿತರರ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲು ಡಿಸಿ ಆದೇಶ..!

ಹನೂರು : ಅಧಿಕಾರ ವಹಿಸಿಕೊಂಡ ಅಲ್ಪ ಕಾಲದಲ್ಲಿಯೇ ದುರಾಡಳಿತ ಇನ್ನಿಲ್ಲದ ಆಟಾ ಟೋಪಾ ನಡೆಸಿ ಇಡೀ ಪಂಚಾಯ್ತಿಯನ್ನೇ ಗುಡಿಸಿ ಗುಂಡಾಂತರ ಮಾಡಿ ಸಿಕ್ಕಿಬಿದ್ದು ಕೊನೆಗೆ ತನಿಖೆ ಆರಂಭಗೊಳ್ಳುತ್ತಿದ್ದಂತೆ ಅಕ್ರಮಕ್ಕೆ ಸಾಕ್ಷಿಯಾಗಿದ್ದ ಕಡತಗಳನ್ನೇ ಹೊತ್ತೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಗಮಿತ ಮುಖ್ಯಾಧಿಕಾರಿ ಅಶೋಕ್ ಹಾಗೂ ಸಿಬ್ಬಂದಿಗಳ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಹತ್ವದ ಆದೇಶ ನೀಡಿದ್ದಾರೆ.

ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಇಂದ್ರಾಣಿ ಕೋಂ ನಿವೃತ್ತ ಡಿವೈಎಸ್ಪಿ ಮುತ್ತು ಸ್ವಾಮಿ ನಾಯ್ಡುರವರಿಗೆ ಸೇರಿದ ಪಿಐಡಿ ಸಂಖ್ಯೆ : ೪-೧-೯೩, ಖಾತೆ ಸಂಖ್ಯೆ ೩೬೦/೧೬ ರಲ್ಲಿ ೨೦೧೬-೧೭/ ೯-೩-೨೦೧೭ ಅನ್ಯಕ್ರಾಂತ ಮಂಜೂರಾತಿ ೩೮.೭೫ ಸೆಂಟ್ (೧೫೬೮ ಚದರ ಮಿಟರ್) ಅಳತೆಯ ಜಾಗವನ್ನು ವಾಣಿಜ್ಯ ಬಳಕೆಗಾಗಿ ಮಂಜೂರಾತಿ ಮಾಡಿದ್ದು ಅದರಲ್ಲಿ ೧೩೩೧-೭೫ ಚದರ ಮೀಟರ್ ವಾಣಿಜ್ಯ ಉದ್ದೇಶಕ್ಕಾಗಿ ಅದರಲ್ಲಿ ಉಳಿದ ೧೫೭.೨೫ ಚದರ ಮೀಟರ್ ಉಧ್ಯಾನವನ ೭೮.೮೫ ಚದರ ಮೀಟರ್ ವಾಹನ ನಿಲ್ದಾಣಕ್ಕೆ ಮೀಸಲಿರಿಸಿ ಉಳಿದ ೧೩೩೧.೭೫ ಚದರ ಮೀಟರ್ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇರುವುದು ಸರಿಯಷ್ಟೆ.

ಆದರೆ ಜಾಗದ ಮಾಲೀಕರ ಪತಿ ನಿವೃತ್ತ ಡಿವೈಎಸ್ಪಿ ಮುತ್ತುಸ್ವಾಮಿ ನಾಯ್ಡುರವರು ತಮ್ಮ ಪ್ರಭಾವ ಬಳಸಿ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳನ್ನು ಸರಿಪಡಿಸಿಕೊಂಡು ಉಧ್ಯಾನವನ ಹಾಗೂ ಪಾರ್ಕಿಂಗ್‌ಗೆ ಮೀಸರಿಲಿಸಿದ್ದ ಸ್ಥಳವನ್ನು ಸೇರಿಸಿ ಒಟ್ಟು ೧೫೬೮.೬೮ ಚದರ ಮಿಟರ್ ನಮೂದಿಸಿ ಅಕ್ರಮ ಇ-ಸ್ವತ್ತು ಮಾಡಿಸಿಕೊಂಡಿರುವುದಲ್ಲದೆ ಸದರಿ ಸ್ಥಳದಲ್ಲಿ ಟೌನ್ ಪ್ಲಾನ್ ಇಲ್ಲದೆ ಪಟ್ಟಣ ಪಂಚಾಯ್ತಿಗೆ ಸುಮಾರು ೩ ಕೋಟಿ ಅಂದಾಜು ವೆಚ್ಚದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆದುಕೊಂಡಿದ್ದು. ಸದರಿ ಸ್ಥಳದಲ್ಲಿ ಉಧ್ಯಾನವನ ಹಾಗೂ ಪಾರ್ಕ್ಗೆ ಮೀಸಲಿರಿಸಿದ್ದ ಸ್ಥಳವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣಕ್ಕೆ ಹಿಂದೆ-ಮುಂದೆ ಎಡ-ಬಲ ನಿಯಮಾನುಸಾರ ಬಿಡಬೇಕಾದ ಸ್ಥಳವನ್ನು ಬಿಡದೆ ನೆಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಮೊದಲನೆ ಮಹಡಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಲೈಸೆನ್ಸ್ ಪಡೆದಿರುವುದಕ್ಕೆ ವಿರುದ್ದವಾಗಿ ವಾಸದ ಮನೆಗಳನ್ನು ನಿರ್ಮಿಸಿರುವುದು ಸೇರಿದಂತೆ ಲೈಸೆನ್ಸ್ ಪಡೆದಿರುವುದಕ್ಕಿಂತ ದುಪ್ಪಟು ಕಟ್ಟಡ ನಿರ್ಮಿಸಿದ್ದು ಪಂಚಾಯ್ತಿಗೆ ಸಲ್ಲಬೇಕಾದ ಶುಲ್ಕ ವಂಚನೆ ಮಾಡುವ ಮೂಲಕ ಆರ್ಥಿಕ ನಷ್ಟ ಉಂಟು ಮಾಡಿರುವುದಲ್ಲದೆ ಅಕ್ಕ ಪಕ್ಕದ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುತ್ತಾರೆ. ಈ ಅಕ್ರಮದ ಬಗ್ಗೆ ಹಿರಿಯ ಪತ್ರಕರ್ತರೊಬ್ಬರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು ಡಿಸಿಯವರು ಎಸಿಯವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದು ತನಿಖಾ ಹಂತದಲ್ಲಿದ್ದು ನ್ಯಾಯಾಲಯದಲ್ಲಿ ಪ್ರಕರಣದ ತೀರ್ಪು ಬಾಕಿಯಿದ್ದರೂ ಅದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದ ಅಶೋಕ ಸದರಿಯವರಿಂದ ಲಕ್ಷಾಂತರ ರೂ ಲಂಚ ಪಡೆದು ವಿವಾಧಿತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕಕ್ಕೆ ತರಾತುರಿಯಲ್ಲಿ ಎನ್‌ಓಸಿ ನೀಡಿರುವುದರ ವಿರುದ್ದವೂ ದೂರು ದಾಖಲಾಗಿದ್ದು ಅದರ ವಿಚಾರಣೆಯೂ ನಡೆಯುತ್ತಿದೆ.

ಈ ನಡುವೆ ಈ‌ ಅಕ್ರಮಕ್ಕೆ ಸಂಬಂಧಿಸಿದ ಕಡತಗಳನ್ನು ರವಾನಿಸುವಂತೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಮಹೇಶ್ ರವರು ಹಲವಾರು ಭಾರಿ ಪತ್ರ ಬರೆದು ತನಿಖಾ ತಂಡವನ್ನು ಕಳುಹಿಸಿದ್ದರೂ ಸಹ ನೀಡದೆ‌ ಹಾಗೂ ಮತ್ತೊಂದು ಅಕ್ರಮ ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜುರವರು ಸಹ ಹಲವಾರು ಬಾರಿ ಕಡತ ಕಳುಹಿಸಲು ಸೂಚಿಸಿ ಅಶೋಕ್ ಗೆ ಪತ್ರ ಬರೆದು ಕಳುಹಿಸಿದ ತನಿಖಾ ತಂಡವು ಬರಿಗೈಯ್ಯಲ್ಲಿ ಹಿಂತಿರುಗಿದ ಹಿನ್ನೆಲೆಯಲ್ಲಿ‌ ಬೇಸತ್ತು ಅಶೋಕ್ ಮತ್ತು ಸಿಬ್ಬಂದಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು‌ ಮಾಡಿ ಅಕ್ರಮಕ್ಕೆ ಸಂಬಂಧಿಸಿದ ಕಡತ ಲಭ್ಯವಾಗದ ಕಾರಣ ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಡಿಸಿಯವರಿಗೆ ಪತ್ರ ಬರೆದು ಸುಮ್ಮನಾದರು. ಆದರೆ ಇದಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಬಂಡತನವನ್ನೇ ಬಂಡವಾಳ ಮಾಡಿಕೊಂಡು‌ ಮೆರೆದ ಅಶೋಕ ಕೊನೆಗೆ ಇದು ಸೇರಿದಂತೆ ಅಕ್ರಮಕ್ಕೆ ಪೂರಕವಾದ ಬಹುತೇಕ ಪ್ರಮುಖ ಕಡತಗಳನ್ನೇ ಕದ್ದೊಯ್ದಿದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯಕ್ಕೆ ಹನೂರಿನಲ್ಲಿಯೇ ದೊಡ್ಡ ಎಂಎಸ್ ಬಿಲ್ಡಿಂಗ್ ನಿರ್ಮಾಣಕ್ಕೆ ಪರವಾನಗಿ ವಿದ್ಯುತ್ ಸಂಪರ್ಕಕ್ಕೆ ನೀಡಿರುವ ಎನ್ಓಸಿಗಳಲ್ಲಿ ತಾನು ನಡೆಸಿರುವ ಅಕ್ರಮ‌ ಬೆಳಕಿಗೆ ಬರುತ್ತದೆಂದು ಸಂಬಂಧಿಸಿದ ಕಡತವನ್ನೇ ಕದ್ದೊಯ್ದಿರುವಲ್ಲಿ ಅಕ್ರಮದ ರೂವಾರಿ ಅಶೋಕನ‌ ಕೈವಾಡ ಕಂಡು ಬಂದ ಹಿನ್ನೆಲೆಯಲ್ಲಿ ಅಶೋಕ ಹಾಗೂ ಸಂಬಂಧಿಸಿದ ನೌಕರರುಗಳ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿ ಕಡತ ವಶಕ್ಕೆ ಹಾಗೂ ತಪ್ಪಿತಸ್ತರ ವಿರುದ್ದ ಕ್ರಮ ವಹಿಸುವಂತೆ ಹಾಲಿ ಪ್ರಭಾರ ಮುಖ್ಯಾಧಿಕಾರಿ ಮಹೇಶ್ ಕುಮಾರ್ ರವರಿಗೆ ಡಿಸಿ ಆದೇಶ ನೀಡಿದ್ದಾರೆ.

ಇದು ಕೇವಲ ಒಂದು ಕಡತದ ಕತೆಯಾಗಿದ್ದು ಇಂತಹ ಇನ್ನೂ ಹಲವಾರು ಕಡತಗಳು ಕಾಣೆಯಾಗಿರುವ ಬಗ್ಗೆ ಮತ್ತಿನ್ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡ ಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button