ಜನ ಗುರುತಿಸಿದ ಜಾಗದಲ್ಲಿ ಗಿಡ ನೆಡಲಿದ್ದಾರೆ ಬಿಬಿಎಂಪಿ ಅರಣ್ಯ ಅಧಿಕಾರಿಗಳು, 50 ಸಾವಿರ ಸಸಿ ನೆಡಲು ಪ್ಲಾನ್

ಬೆಂಗಳೂರು: ತಂತ್ರಜ್ಞಾನ ಬಳಸಿಕೊಂಡು ಬೆಂಗಳೂರಿನ ಹಸಿರು ಹೊದಿಕೆಯನ್ನು ಮರಳಿ ತರುವ ಪ್ರಯತ್ನಕ್ಕೆ ಕೈ ಹಾಕಿರುವ ಬಿಬಿಎಂಪಿ ಅರಣ್ಯ ವಿಭಾಗ, ಮ್ಯಾಪಥಾನ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 50 ಸಾವಿರ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದೆ.ನಗರದಲ್ಲಿ ಸಸಿ ನೆಟ್ಟು ಬೆಳೆಸಲು ಯೋಗ್ಯವಾದ ಸ್ಥಳ ಗುರುತಿಸಲು ಎಐ ಆಧಾರಿತ ಮ್ಯಾಪಥಾನ್ ಯೋಜನೆಯನ್ನು ಬಿಬಿಎಂಪಿಯು ಪರಿಚಯಿಸಿದೆ. 2024ರ ಜೂನ್‌ನಲ್ಲಿ ವಿಶ್ವ ಸಂಪನ್ಮೂಲ ಸಂಸ್ಥೆ (ಡಬ್ಲ್ಯುಆರ್‌ಐ) ಸಹಯೋಗದಲ್ಲಿ ಬಿಬಿಎಂಪಿ ಅರಣ್ಯ ವಿಭಾಗ ಮತ್ತು ಹವಾಮಾನ ಕ್ರಿಯಾ ಕೋಶ (ಸಿಎಸಿ) ಈ ಯೋಜನೆಗೆ ಚಾಲನೆ ನೀಡಿವೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಪಾಲುದಾರರಾಗಿದ್ದಾರೆ.ಸಾರ್ವಜನಿಕರು ಗುರುತಿಸಿದ ಸ್ಥಳವನ್ನು ಅರಣ್ಯ ವಿಭಾಗದ ಅಧಿಕಾರಿಗಳು ಪರಿಶೀಲಿಸಿ, ಅದು ಯೋಗ್ಯವಾಗಿದ್ದಲ್ಲಿ ಮಾತ್ರ ಸಸಿ ನೆಡಲು ಅನುಮತಿ ನೀಡುತ್ತಾರೆ. ಈ ಯೋಜನೆಯಡಿ ಬೊಮ್ಮನಹಳ್ಳಿ ವಲಯದಲ್ಲಿ ಈಗಾಗಲೇ 8 ಸಾವಿರ ಸಸಿಗಳನ್ನು ಯಶಸ್ವಿಯಾಗಿ ನೆಡಲಾಗಿದ್ದು, ಉಳಿದ ವಲಯಗಳಿಗೂ ಯೋಜನೆ ವಿಸ್ತರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.ಮ್ಯಾಪಥಾನ್ ಉಪಕ್ರಮದಡಿ ಪಾರ್ಕ್‌ಗಳಿಗೆ ಸೂಕ್ತವಾದ ತೆರೆದ ಸ್ಥಳವನ್ನು ನಾಗರಿಕರೇ ಗುರುತಿಸಿ, ಬಿಬಿಎಂಪಿಗೆ ಮಾಹಿತಿ ಒದಗಿಸುತ್ತಾರೆ. ಈ ಮಾಹಿತಿ ಆಧರಿಸಿ ಅಧಿಕಾರಿಗಳು, ಸ್ಥಳ ಪರಿಶೀಲನೆಗೆ ಒಳಪಡಿಸುತ್ತಾರೆ. ಆ ಮೂಲಕ ಖಾಲಿ ಜಾಗ ಖಾಸಗಿ ಒಡೆತನಕ್ಕೆ ಸೇರಿದೆಯೇ? ಅಥವಾ ಸರಕಾರಿ, ಅರೆ ಸರಕಾರಿ ಎಂಬುದನ್ನು ಖಚಿತ ಮಾಹಿತಿ ಕಲೆ ಹಾಕಲಾಗುತ್ತದೆ.ಒಂದು ವೇಳೆ ಸ್ಥಳ ಖಾಸಗಿ ಒಡೆತನಕ್ಕೆ ಸೇರಿದ್ದರೆ, ಮಾಲೀಕರು ಅನುಮತಿಸಿದರೆ ಮಾತ್ರ ಸಸಿ ನೆಡಲು ಕ್ರಮ ವಹಿಸಲಾಗುತ್ತದೆ. ಇಲ್ಲದಿದ್ದರೆ, ಆ ಸ್ಥಳ ತಿರಸ್ಕರಿಸಲಾಗುತ್ತದೆ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.ಯೋಜನೆಗೆ ಚಾಲನೆ ನೀಡಿದ ನಂತರ ಈವರೆಗೆ ಎಲ್ಲ ವಲಯದ ನಾಗರಿಕರಿಂದ 22 ಅರ್ಜಿಗಳು ಸಲ್ಲಿಕೆಯಾಗಿವೆ. ಇವೆಲ್ಲವುಗಳ ಪರಿಶೀಲನೆ ನಡೆಯುತ್ತಿದ್ದು, ಪೂರ್ಣಗೊಂಡ ನಂತರ ಸಸಿ ನೆಡಲು ಗುರುತಿಸಿದ ಸ್ಥಳಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅರಣ್ಯ ವಿಭಾಗದ ಡಿಸಿಎಫ್ ಬಿ.ಎಲ್.ಜಿ. ಸ್ವಾಮಿ ತಿಳಿಸಿದರು.