ಇತ್ತೀಚಿನ ಸುದ್ದಿ

ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಸಿದ್ಧತೆ, ಪ್ರತಿ ಕಿ.ಮೀ.ಗೆ ಎಷ್ಟು ಹೆಚ್ಚಳ?

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಮತ್ತು ಮೆಟ್ರೋ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಆಟೋರಿಕ್ಷಾ ಪ್ರಯಾಣ ದರವೂ ಹೆಚ್ಚಾಗುವುದು ನಿಚ್ಚಳವಾಗಿದೆ.ನಗರದ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತ ಸಾಹಿಲ್‌ ಬಾಗ್ಲಾ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮೊದಲ 2 ಕಿ.ಮೀ.ಗೆ 30 ರೂ. ಇರುವ ಕನಿಷ್ಠ ಬಾಡಿಗೆ ದರವನ್ನು 40 ರೂ.ಗೆ ಹೆಚ್ಚಿಸಿ, ಹೆಚ್ಚುವರಿ ಕಿ.ಮೀ. ದರವನ್ನು ಪ್ರತಿ ಕಿ.ಮಿ.ಗೆ 15ರಿಂದ 20 ರೂ.ಗೆ ಹೆಚ್ಚಿಸಬೇಕೆಂದು ಆಟೋ ಚಾಲಕರ ಸಂಘಟನೆಗಳು ಬೇಡಿಕೆ ಮುಂದಿಟ್ಟವು.ಸಭೆಯಲ್ಲಿ ಆರ್‌ಟಿಒ ಅಧಿಕಾರಿಗಳಾದ ಕೆ.ಎಸ್‌. ಸೌಂದರ್ಯ, ಮಲ್ಲೇಶ್‌ ಹಾಗೂ 15ಕ್ಕೂ ಹೆಚ್ಚು ಆಟೋ ಚಾಲಕರ ಸಂಘಟನೆಗಳು ಭಾಗವಹಿಸಿದ್ದವು. ದರ ಏರಿಕೆಗೆ ಸಂಬಂಧಿಸಿದಂತೆ ಒಂದು ವಾರದೊಳಗಾಗಿ ತಮ್ಮ ಅಭಿಪ್ರಾಯವನ್ನು ಶಾಂತಿನಗರದ ಆರ್‌ಟಿಎ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಯಿತು.ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ, ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಆಟೋ ಸೇರಿದಂತೆ ಮತ್ತಿತರ ವಸ್ತುಗಳ ಬೆಲೆ ಏರಿಕೆಯಿಂದ ಆಟೋ ದರ ಏರಿಕೆ ಅನಿವಾರ್ಯವಾಗಿದೆ ಎಂದು ಆಟೋ ಚಾಲಕರ ಒಕ್ಕೂಟ ಬೇಡಿಕೆ ಮುಂದಿಟ್ಟಿತು.ಈ ನಡುವೆ, ಪೀಸ್‌ ಆಟೋ ಒಕ್ಕೂಟ ಮತ್ತು ಕರ್ನಾಟಕ ಚಾಲಕರ ಒಕ್ಕೂಟಗಳು ”ಬೆಲೆ ಏರಿಕೆಯಿಂದ ಪ್ರಯಾಣಿಕರು ನಿರುತ್ಸಾಹಗೊಳ್ಳುವ ಸಾಧ್ಯತೆ ಇದೆ. ಸಂಚಾರ ದಟ್ಟಣೆ ಸಂದರ್ಭದಲ್ಲಿಯೂ ಅನೇಕ ಆನ್‌ಲೈನ್‌ ಆ್ಯಪ್‌ಗಳು, ಕ್ಯಾಬ್‌ಗಳು ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿರುವ ಕಾರಣ ಪ್ರಯಾಣಿಕರು ಅವುಗಳತ್ತ ಮುಖ ಮಾಡುವ ಸಾಧ್ಯತೆಯಿದೆ. ಹೀಗಾಗಿ, ಆಟೋ ದರ ಹೆಚ್ಚಳಕ್ಕೆ ನಮ್ಮ ಸಹಮತವಿಲ್ಲ” ಎಂದು ನಿಲುವನ್ನು ವ್ಯಕ್ತಪಡಿಸಿದವು.2013ರಲ್ಲಿ ದರ ಪರಿಷ್ಕರಣೆಯಾಗಿತ್ತು. 2021ರ ನವೆಂಬರ್‌ನಲ್ಲಿ ಮೊದಲ 1.9 ಕಿ.ಮೀ.ಗೆ ಕನಿಷ್ಠ 30 ರೂ. ಹಾಗೂ ಹೆಚ್ಚುವರಿ ಪ್ರತಿ ಕಿ.ಮೀ.ಗೆ 15 ರೂ. ನಿಗದಿಯಾಗಿತ್ತು. ಆದರೆ, ಮೂರು ವರ್ಷಗಳಾದರೂ ದರ ಏರಿಕೆ ಮಾಡಿಲ್ಲ. ಹೀಗಾಗಿ, ದರ ಹೆಚ್ಚಿಸಬೇಕು ಎಂದು ಅನೇಕ ಆಟೋ ಚಾಲಕ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದವು.ಆಟೋ ಚಾಲಕರು ಮತ್ತುನಾಗರಿಕರ ಅಭಿಪ್ರಾಯ ಭಿನ್ನವಾಗಿವೆ. ಅವರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡಲು ಒಂದು ವಾರ ಸಮಯ ನೀಡಲಾಗಿದೆ. ನಂತರ ಅವುಗಳನ್ನು ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಆರ್‌ಟಿಎ ಸಭೆಯಲ್ಲಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತ ಸಾಹಿಲ್‌ ಬಾಗ್ಲಾ ತಿಳಿಸಿದರು.ಸರಕಾರದಿಂದ ಆಟೋ ಚಾಲಕರಿಗೆ ವಸತಿ, ವಿದ್ಯಾಭ್ಯಾಸ ಸೇರಿದಂತೆ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆಯುತ್ತಿಲ್ಲ. ಎಲ್ಲಾ ವಸ್ತುಗಳ ಬೆಲೆ ಏರಿಕೆಯ ನಡುವೆ ಆಟೋ ಪ್ರಯಾಣ ದರ ಏರಿಕೆ ಅನಿವಾರ್ಯ. ಇನ್ನೊಂದು ವಾರದಲ್ಲಿ ಬೆಲೆ ಏರಿಕೆ ಆಗದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ. ಮಂಜುನಾಥ್‌ ಎಚ್ಚರಿಕೆ ನೀಡಿದರು.ಹೋಟೆಲ್‌, ರೆಸ್ಟೋರೆಂಟ್‌ ದರ ತನ್ನಿಂತಾನೇ ಏರಿಕೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಆಟೋ ಪ್ರಯಾಣ ದರದ ಏರಿಕೆ ಮಾಡುವ ಜತೆಗೆ ಓಲಾ, ಊಬರ್‌ನಂತಹ ಖಾಸಗಿ ಸಂಸ್ಥೆಗಳು ತನ್ನಿಷ್ಟದಂತೆ ದರ ಏರಿಕೆ ಮಾಡುವ ಕ್ರಿಯೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ವಾಭಿಮಾನಿ ಚಾಲಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತನ್ವೀರ್‌ ಪಾಷಾ ಆಗ್ರಹಿಸಿದರು.ಬೆಲೆ ಏರಿಕೆಯಿಂದ ಆಟೋ ಚಾಲಕರು ನಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆ ನಷ್ಟದಿಂದ ಚಾಲಕರನ್ನು ಪಾರು ಮಾಡಲು ಕೂಡಲೇ ಸರಕಾರ ಆಟೋ ದರ ಏರಿಕೆ ಮಾಡಬೇಕು. ಜತೆಗೆ, ಓಲಾ, ಊಬರ್‌ಗಳನ್ನು ರದ್ದುಗೊಳಿಸಬೇಕು ಎಂದು ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್‌ ಸಿಐಟಿಯು ಅಧ್ಯಕ್ಷ ಸಿ.ಎಂ. ಶ್ರೀನಿವಾಸ್‌ ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button