
ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್(96) ಅವರು ಇಂದು (ಮಾ.28) ಬೆಳಗ್ಗೆ 3 ಗಂಟೆಗೆ ಮುಂಜಾನೆ ನಿಧನರಾದರು. ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು, ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ ಬಳಿ)ನಲ್ಲಿ 1963ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದರು. ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದೆ.ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಬಿ ಗರುಡಾಚಾರ್ ಅವರ ತಂದೆಯಾಗಿರುವ ಬಿ.ಎನ್.ಗರುಡಾಚಾರ್ ಅವರು ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಮಹಾನಗರ ಡಿಸಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಡಿಜಿ-ಐಜಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.