
ಬೆಂಗಳೂರಿನಲ್ಲಿ ಕಸ ವಿಲೇವಾರಿಯಲ್ಲಿ ಭಾರಿ ಸಮಸ್ಯೆ ಉಂಟಾಗಿದೆ. ಮಿಟ್ಟಗಾನಹಳ್ಳಿಯಲ್ಲಿ ಕಸದ ಲಾರಿಗಳು ನಿಂತಲ್ಲೇ ನಿಂತಿವೆ. ಈ ಸಮಸ್ಯೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲೂ ಪ್ರತಿಧ್ವನಿಸಿದೆ. ಬಿಬಿಎಂಪಿ ಅಧಿಕಾರಿಗಳು ಉದಾಸೀನ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಾಳೆಯಿಂದ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತಾ ದೇಶ ವಿದೇಶಗಳಲ್ಲಿ ಖ್ಯಾತವಾಗಿರುವ ಬೆಂಗಳೂರು ಮತ್ತೆ ಗಾರ್ಬೇಜ್ (Garbage) ಸಿಟಿಯಾಗಿದೆ. ಕಸ ಡಂಪಿಂಗ್ ಯಾರ್ಡ್ ಬಂದ್ ಹಿನ್ನೆಲೆ ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರು ನಗರದ ಕಸಗಳು ವಿಲೇವಾರಿಯಾಗುತ್ತಿಲ್ಲ. ಕಸ ತುಂಬಿದ ವಾಹನಗಳು ನಗರದ ಎಲ್ಲೆಂದರಲ್ಲಿ ಕಳೆದ ಕೆಲ ದಿನಗಳಿಂದ ನಿಂತಲ್ಲೇ ನಿಂತ್ತುಕೊಂಡಿವೆ. ಗಾಡಿಗಳಲ್ಲಿರುವ ಕಸ ಗಬ್ಬೆದ್ದು ನಾರುತ್ತಿದೆ. ನಾಳೆಯಿಂದ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಿಧಾನಸಭೆಯಲ್ಲೂ ಕಸದ ಸಮಸ್ಯೆ ಪ್ರತಿಧ್ವನಿಸಿದೆ. ಆದರೂ ಬಿಬಿಎಂಪಿ (BBMP) ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಸದ್ಯ ನಗರದಲ್ಲಿ ಕಸದ ಸಂಕಷ್ಟ ಮಿತಿಮೀರಿದೆ. ಲಾಲ್ ಬಾಗ್ ಹಿಂಭಾಗದ ರಸ್ತೆಯಲ್ಲಿ ಅರ್ಧ ರಸ್ತೆಯೇ ಕಸದಿಂದ ಮುಚ್ಚಿ ಹೋಗಿದೆ. ಸಿದ್ದಾಪುರ ರಸ್ತೆಯಲ್ಲಿ ರಸ್ತೆ ತುಂಬ ಕಸದರಾಶಿ ಬಿದಿದ್ದು, ಜೊತೆಗೆ ಆಟೋ, ಲಾರಿಗಳು ಸಾಲುಗಟ್ಟಿ ನಿಂತಿವೆ. ಕಸದ ಗಬ್ಬುವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಧಾನಪರಿಷತ್ನಲ್ಲಿ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ವಿಚಾರವಾಗಿ ಪರಿಷತ್ನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕೋರ್ಟ್ಗೆ ಹೋಗಿ ಟೆಂಡರ್ ಕರೆಯೋದಕ್ಕೂ ಬಿಡುತ್ತಿಲ್ಲ. ಬೆಂಗಳೂರಿನ ಶಾಸಕರು ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಕಸದ ವಿಚಾರದಲ್ಲಿ ಎಲ್ಲ ಪಕ್ಷದ ಶಾಸಕರು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ಕೈಗಾರಿಕಾ ಪ್ರದೇಶದಲ್ಲಿ 100 ಎಕರೆ ಕೊಡುವಂತೆ ಸಚಿವರನ್ನು ಕೇಳಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಸ ಹಾಕ್ತೀರಾ ಅಂತಾ ಕೇಳಿದ್ದರು. ದೊಡ್ಡಬಳ್ಳಾಪುರ ಭಾಗದಲ್ಲಿ ಜಮೀನು ಖರೀದಿ ಮಾಡುತ್ತಿದ್ದೇವೆ. ಕಸದ ಸಮಸ್ಯೆ ಬಗೆಹರಿಸುವ ಕುರಿತು ಮುಂದೆ ಉತ್ತರ ಕೊಡುತ್ತೇನೆ ಎಂದಿದ್ದಾರೆ.ಇನ್ನೂ ಕಸದ ಟೆಂಡರ್ ಆಗಿಲ್ಲ ಆಗಲೇ ಮಹಾನ್ ನಾಯಕರೊಬ್ಬರು ಡಿಕೆ ಶಿವಕುಮಾರ್ 15 ಸಾವಿರ ಕೋಟಿ ರೂ ಹೊಡೆದಿದ್ದಾರೆಂದು ಸುದ್ದಿಗೋಷ್ಠಿ ಮಾಡಿದರು. ಇನ್ನೂ ಟೆಂಡರ್ ಆಗೇ ಇಲ್ಲ, ಆಗಲೇ ಲೂಟಿ ಆಗಿದೆ ಅಂತಾ ಹೇಳಿದರು. ಈ ವೇಳೆ ಇದನ್ನೆಲ್ಲ ಎದುರಿಸಲು ಗಟ್ಟಿ ಇದ್ದೀರಲ್ಲ ಬಿಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಯಾವ ಏರಿಯಾದಲ್ಲಿ ಏನು ಕತೆ?
- ಕೆ.ಆರ್.ಮಾರ್ಕೆಟ್: ರಸ್ತೆ ಬದಿ ನಿಂತ ಕಸದ ವಾಹನಗಳು
- ಮೆಜೆಸ್ಟಿಕ್: ಫುಟ್ ಪಾತ್, ಡಿವೈಡರ್ ಮೇಲೆ ಕಸದರಾಶಿ
- ಲಾಲ್ ಬಾಗ್ ಸಿದ್ದಾಪುರ ರಸ್ತೆ: ಮುಖ್ಯ ರಸ್ತೆಯಲ್ಲೇ ಕಸದ ರಾಶಿ, ಕಸದಿಂದ ರಸ್ತೆಗೆ ಹರಿದ ತ್ಯಾಜ್ಯ ನೀರು
- ವಿಲ್ಸನ್ ಗಾರ್ಡನ್: ಹಿಂದೂ ರುದ್ರಭೂಮಿ ಸುತ್ತಮುತ್ತ ಕಸದ ರಾಶಿ
- ವಿಜಯನಗರ: ಕಾಮಾಕ್ಷಿಪಾಳ್ಯ ಬ್ರಿಡ್ಜ್ ಬಳಿ ರಸ್ತೆಯಲ್ಲೇ ಕಸ
- ನಿಮಾನ್ಸ್ ಆಸ್ಪತ್ರೆ ರಸ್ತೆ: ಆರ್.ಒ.ಪ್ಲಾಂಟ್ ಬಳಿ ಕಸದ ರಾಶಿ, ರಸ್ತೆಯಲ್ಲೇ ಬಿದ್ದಿರೋ ಪ್ಲಾಸ್ಟಿಕ್ ಬ್ಯಾಗ್
- ಶಿವಾಜಿನಗರ: ಮಾರ್ಕೆಟ್ ಸುತ್ತಮುತ್ತ ಎಲ್ಲೆಂದರಲ್ಲಿ ತ್ಯಾಜ್ಯ ದರ್ಶನ