
ಗುಂಡ್ಲುಪೇಟೆ:ಟಾಟಾ ಏಸ್ ವಾಹನ ಪಲ್ಟಿಯಾದ ಪರಿಣಾಮ ಸುಮಾರು 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಬಳಿ ನಡೆದಿದೆ.
ಅಣ್ಣರೂಕೇರಿ ಗ್ರಾಮದಿಂದ ಚಿಕ್ಕದೇವಮ್ಮನ ಬೆಟ್ಟಕ್ಕೆ ಸುಮಾರು ಇಪ್ಪತ್ತು ಮಂದಿಯನ್ನು ತುಂಬಿಕೊಂಡು ತೆರಳುತಿದ್ದ ವೇಳೆ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿದೆ.ಘಟನೆಯಲ್ಲಿ ಜಯಂತಿ(30), ರಾಜಮ್ಮ(29) ಎಂಬುವವರ ತಲೆ, ಕೈ ಕಾಲು, ಮುಖ ಹಾಗೂ ಕಣ್ಣಿನ ಭಾಗಕ್ಕೆ ತರಚಿದ ಗಾಯವಾಗಿದ್ದು, ನಾಗಮ್ಮ(40), ರಾಮೇಗೌಡ(27), ಮಹದೇವಮ್ಮ (35), ಕುಮಾರ(24), ಮಂಜು(34) ತಲೆ, ಕೈ ಕಾಲು ಭುಜಕ್ಕೆ ಹಾಗೂ ರಾಚಶೆಟ್ಟಿ(43), ಕುಸುಮ(38), ಮಹೇಶ್ (34), ರಂಗಮ್ಮ, ಕೆಂಪರಾಜು, ಚಿಕ್ಕದೇವಿ, ಜ್ಯೋತಿ, ಮಂಜು ತಲೆಗೆ ಗಂಭೀರ ಗಾಯಗಳಾಗಿದೆ.ಅಪಘಾತದ ಮಾಹಿತಿ ಅರಿತ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪೊಲೀಸರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ತಲೆ ಹಾಗೂ ಕೈ ಕಾಲಿಗೆ ತೀವ್ರ ಗಾಯವಾದ ನಾಲ್ಕು ಮಂದಿಯನ್ನು ಮೈಸೂರಿಗೆ ರವಾನೆ ಮಾಡಲಾಗಿದ್ದು, ಹತ್ತಕ್ಕೂ ಅಧಿಕ ಮಂದಿಯನ್ನು ಚಾಮರಾಜನಗರ ಜಿಲ್ಲಾಸತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ