ಇತ್ತೀಚಿನ ಸುದ್ದಿ
Trending

ಬೇಸಿಗೆಯಲ್ಲಿ ಐಸ್‌ಕ್ರೀಂ, ಹಾಲು, ಮೊಸರಿಗೆ ಭಾರಿ ಬೇಡಿಕೆ

ಹಾಸನ: ಬೇಸಿಗೆಯ ಸುಡುಬಿಸಿಲಿನ ಪರಿಣಾಮ ಹಾಸನ ಹಾಲು ಒಕ್ಕೂಟದ ಹಾಲು, ಮೊಸರು, ಮಜ್ಜಿಗೆ, ಐಸ್‌ ಕ್ರೀಂ, ತುಪ್ಪ ಇತರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಪ್ರತಿನಿತ್ಯ 12 ಸಾವಿರ ಲೀಟರ್‌ನಷ್ಟು ಐಸ್‌ ಕ್ರೀಂಗೆ ಬೇಡಿಕೆ ಇದ್ದು, ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇನ್ನು 10 ಸಾವಿರ ಲೀಟರ್‌ನಷ್ಟು ಮೊಸರು, ಅದರ ಎರಡು ಪಟ್ಟು ಮಜ್ಜಿಗೆಗೆ ಬೇಡಿಕೆ ಕುದುರಿದೆ. ಗೋದಾಮಿನಲ್ಲಿ ತುಂಬಿ ತುಳುಕುತ್ತಿದ್ದ ಹಾಲಿನ ಪೌಡರ್‌, ನಂದಿನಿ ತುಪ್ಪ ಮಾರಾಟವಾಗುತ್ತಿದ್ದು, ಹೊಸದಾಗಿ ಹಾಲಿನ ಉತ್ಪನ್ನ ತಯಾರು ಮಾಡಲಾಗುತ್ತಿದೆ ಎನ್ನುತ್ತಾರೆ ಒಕ್ಕೂಟದ ಅಧಿಕಾರಿಗಳು.ಜಿಲ್ಲೆಯಲ್ಲಿ 1.60 ಲಕ್ಷ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಚಿಕ್ಕಮಗಳೂರು ವ್ಯಾಪ್ತಿ ಒಳಗೊಂಡಿರುವ ಹಾಸನ ಒಕ್ಕೂಟಕ್ಕೆ ಪ್ರತಿನಿತ್ಯ 14.50 ಲಕ್ಷ ಲೀಟರ್‌ ಹಾಲು ಬರುತ್ತಿತ್ತು. ಪ್ರಸ್ತುತ ಒಂದರಿಂದ ಒಂದೂವರೆ ಲಕ್ಷ ಲೀಟರ್‌ನಷ್ಟು ಕಡಿಮೆಯಾಗಿದೆ. ಲಭ್ಯವಿರುವ ಹಾಲಿನಲ್ಲಿ ಶೇ.50ರಿಂದ 60ರಷ್ಟು ಹಾಲಿನ ರೂಪದಲ್ಲಿ ಮಾರಾಟ ಮಾಡಿ ಉಳಿದುದನ್ನು ಪೌಡರ್‌ ಮತ್ತಿತರ ಉತ್ಪನ್ನಗಳಾಗಿ ಪರಿವರ್ತನೆ ಮಾಡಲಾಗುತ್ತಿತ್ತು. ಹೀಗೆ ಪರಿವರ್ತನೆ ವೆಚ್ಚ ಹೆಚ್ಚಳ ಹಾಗೂ ಹಾಲಿನ ಪೌಡರ್‌, ತುಪ್ಪದ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದರಿಂದ ಸೂಕ್ತ ಸಮಯದಲ್ಲಿ ಮಾರಾಟ ಮಾಡೋಣ ಎಂಬ ನಿರೀಕ್ಷೆಯಲ್ಲಿದ್ದ ಒಕ್ಕೂಟ ಇದೀಗ ಪ್ರತಿಯೊಂದು ಪದಾರ್ಥಕ್ಕೂ ಬೇಡಿಕೆ ಹೆಚ್ಚಿ ಸಂತಸ ಇಮ್ಮಡಿಗೊಳಿಸಿದೆ.ಒಕ್ಕೂಟದಲ್ಲಿ ಸರಿಸುಮಾರು ತಿಂಗಳಿಗೆ 300 ಟನ್‌ ತುಪ್ಪ ತಯಾರಾಗುತ್ತದೆ. ಇದರಲ್ಲಿ ಸ್ಥಳೀಯವಾಗಿ 20 ರಿಂದ 25 ಟನ್‌ ಮಾರಾಟವಾದರೆ, ಉಳಿದ 200ರಿಂದ 225 ಟನ್‌ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಬೆಳಗಾವಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಕಳೆದ ಕೆಲ ತಿಂಗಳವರೆಗೂ ಒಕ್ಕೂಟದಲ್ಲಿ 1,100 ಮೆಟ್ರಿಕ್‌ ಟನ್‌ ಬೆಣ್ಣೆ ದಾಸ್ತಾನು ಇತ್ತು. ಬೇಡಿಕೆ ಹೆಚ್ಚಿ ಉತ್ತಮ ಬೆಲೆಯೂ ದೊರೆತ ಕಾರಣ ಬಹುತೇಕ ಖಾಲಿಯಾಗಿದ್ದು, ಉತ್ತಮ ಬೆಲೆಯ ಮೂಲಕ ಲಾಭ ಕೂಡ ಬಂದಿದೆ.ತಿರುಪತಿ ಲಡ್ಡು ತಯಾರಿಸಲು ಕಳೆದ ಏಳೆಂಟು ವರ್ಷದ ಹಿಂದೆ ಹಾಸನ ಒಕ್ಕೂಟದಿಂದ ತಿಂಗಳಿಗೆ ನಾಲ್ಕು ಟ್ಯಾಂಕರ್‌ ಅಂದರೆ 35 ಸಾವಿರ ಲೀಟರ್‌ ತುಪ್ಪ ಸರಬರಾಜು ಆಗುತ್ತಿತ್ತು. ಬಳಿಕ ಟೆಂಡರ್‌ ಕೈತಪ್ಪಿದ ಪರಿಣಾಮ ಸಾಗಣೆಯೂ ನಿಂತಿತ್ತು. ಇದೀಗ ಕೆಎಂಎಫ್‌ಗೆ ತುಪ್ಪ ಸರಬರಾಜು ಟೆಂಡರ್‌ ಸಿಕ್ಕಿರುವ ಕಾರಣ ಹಾಸನ ಒಕ್ಕೂಟಕ್ಕೂ ತುಪ್ಪ ಸಾಗಣೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ. ಈ ಎಲ್ಲ ಕಾರಣದಿಂದ ಹಾಸನ ಹಾಲು ಒಕ್ಕೂಟದ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿದೆ.

ಹೈದರಾಬಾದ್‌ಗೆ ಹಾಲು

ಹಾಸನ ಒಕ್ಕೂಟದಿಂದ ನಿತ್ಯ ಹೈದರಾಬಾದ್‌ ಮಾರುಕಟ್ಟೆಗೆ 2.10 ಲಕ್ಷ ಲೀಟರ್‌ ಹಾಲು ಸರಬರಾಜು ಮಾಡಲಾಗುತ್ತಿದೆ. ರಾಜ್ಯ, ಹೊರ ರಾಜ್ಯದಲ್ಲಿಮಾರುಕಟ್ಟೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಒಕ್ಕೂಟ ಪ್ರಾರಂಭದಿಂದ ಈವರೆಗೂ ರೈತರು ಎಷ್ಟೇ ಹಾಲು ತಂದರೂ ಖರೀದಿಸಿ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿದೆ. ಜತೆಗೆ ಹಸುವಿಗೆ ವಿಮೆ, ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳನ್ನು ಗೌರವಿಸುತ್ತಿದೆ. ಒಕ್ಕೂಟ ಆದಾಯದಲ್ಲೂಮುಂಚೂಣಿಯಲ್ಲಿಇರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.ಹಾಸನ ಹಾಲು ಒಕ್ಕೂಟವನ್ನು ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕೌಶಿಕದ ಕೈಗಾರಿಕಾ ಪ್ರದೇಶದಲ್ಲಿ ಮೆಗಾಡೇರಿಯಲ್ಲಿ ಯಂತ್ರೋಪಕರಣ ಆಮದು ಮಾಡಿಕೊಂಡು ಪ್ರಾಯೋಗಿಕ ಚಾಲನೆಗೆ ಸಿದ್ಧಪಡಿಸಲಾಗುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನ ತಯಾರಿಕೆಯೂ ಹೆಚ್ಚಳವಾಗಲಿದ್ದು, ಮಾರುಕಟ್ಟೆ ವಿಸ್ತರಣೆಗೂ ಯೋಜನೆ ರೂಪಿಸಲಾಗುತ್ತಿದೆ ಎಂದಿದ್ದಾರೆ ಎಚ್‌.ಡಿ.ರೇವಣ್ಣ, ಶಾಸಕರು, ಅಧ್ಯಕ್ಷರು, ಹಾಸನ ಹಾಲು ಒಕ್ಕೂಟ.ಹಾಲು, ಐಸ್‌ ಕ್ರೀಂ, ಮೊಸರು, ಮಜ್ಜಿಗೆಗೆ ಬೇಡಿಕೆ ಹೆಚ್ಚಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಿರುವ ಕಾರಣ ಗ್ರಾಹಕರ ವಿಶ್ವಾಸ ಹೆಚ್ಚಿದೆ ಎಂದಿದ್ದಾರೆ ರಮೇಶ್‌, ಎಂಡಿ, ಹಾಸನ ಹಾಲು ಒಕ್ಕೂಟ.


Related Articles

Leave a Reply

Your email address will not be published. Required fields are marked *

Back to top button