
ಬೆಂಗಳೂರು, ಮಾರ್ಚ್ 26: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೆಲವು ಕಿಡಗೇಡಿಗಳು ಚೆಲ್ಲಾಟವಾಡಲು ಮುಂದಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ (SSLC Exam) ಸಮಯದಲ್ಲಿ ಮಕ್ಕಳ ಜೊತೆ ಸಾಮಾಜಿಕ ಜಾಲತಾಣದಲ್ಲಿ (Social Media) ಚೆಲ್ಲಾಟವಾಡುತ್ತಿದ್ದು, ಶಿಕ್ಷಣ ಇಲಾಖೆ (Education Department) ಮಾತ್ರ ಕಣ್ಣುಮುಚ್ಚಿ ಕುಳಿತಿದೆ. ಪರೀಕ್ಷೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ದಿಕ್ಕು ತಪ್ಪಿಸಲು ಕಿಡಗೇಡಿಗಳು ಮುಂದಾಗಿದ್ದಾರೆ. ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳನ್ನು ವೈರಲ್ ಮಾಡುತ್ತಿದ್ದಾರೆ.ಕಿಡಿಗೇಡಿಗಳು ಹಳೆಯ ಪ್ರಶ್ನೆ ಪತ್ರಿಕೆ ಎಡಿಟ್ ಮಾಡಿ, ‘‘ಇದು ಈ ವರ್ಷದ ಪ್ರಶ್ನೆ ಪತ್ರಿಕೆ, ದುಡ್ಡು ಕೊಟ್ಟರೆ ಪ್ರಶ್ನೆ ಪತ್ರಿಕೆ ಸಿಗುತ್ತದೆ’’ ಎಂದು ವೈರಲ್ ಮಾಡುತ್ತಿದ್ದಾರೆ. ಇದರಿಂದ ಮೋಸ ಹೋಗುತ್ತಿರುವ ವಿದ್ಯಾರ್ಥಿಗಳು, ಫೇಕ್ ಪ್ರಶ್ನೆಪತ್ರಿಕೆಗಳನ್ನು ನಂಬಿ ಓದಿಕೊಂಡು ಹೋಗಿ ಮೋಸ ಹೋಗುತ್ತಿದ್ದಾರೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ಹೇಳಿದ್ದಾರೆ.
ಸುಳ್ಳು ಪ್ರಶ್ನೆ ಪತ್ರಿಕೆಗಳನ್ನು ವೈರಲ್ ಮಾಡುವ ವಿಚಾರವನ್ನು ಖಾಸಗಿ ಶಾಲೆಗಳ ಒಕ್ಕೂಟ ಈಗಾಗಲೇ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದೆ. ಆದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಶಾಲೆಗಳು ಹಾಗೂ ಪೋಷಕರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಣದಲ್ಲಿನ ಕಿಡಗೇಡಿಗಳನ್ನು ಮಟ್ಟಹಾಕುವಂತೆ ಒತ್ತಾಯ ಮಾಡಿದ್ದಾರೆ. ಸುಳ್ಳು ಪ್ರಶ್ನೆ ಪತ್ರಿಕೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮೋಸ ಮಾಡಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಟವಾಡುತ್ತಿರುವ ಕಿಡಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕಮಾರ್ ತಿಳಿಸಿದ್ದಾರೆ.ಈ ಬಗ್ಗೆ ಎಸ್ಎಸ್ಎಲ್ ಸಿ ಮುಖ್ಯ ಪರೀಕ್ಷೆಯ ಮೊದಲ ದಿನವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗಮನಕ್ಕೆ ‘ಟಿವಿ9’ ತಂದಿತ್ತು. ಈ ವೇಳೆ ಕಾನೂನು ಕ್ರಮಕ್ಕೆ ಮುಂದಾಗುವ ಭರವಸೆಯನ್ನು ಸಚಿವರು ನೀಡಿದ್ದರು. ಆದರೂ ಕೂಡಾ ಸಮಾಜಿಕ ಜಾಲತಾಣದಲ್ಲಿ ಕಿಡಗೇಡಿಗಳ ಹಾವಳಿ ಮಾತ್ರ ಕಡಿಮೆಯಾಗಿಲ್ಲ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಮಕ್ಕಳ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಫೇಕ್ ಪ್ರಶ್ನೆ ಪತ್ರಿಕೆಯನ್ನು ಹರಿಬಿಡುತ್ತಿದ್ದಾರೆ. ಇದರಿಂದ ಕೆಲ ಮಕ್ಕಳು ಗೊಂದಲಗೊಳಗಾಗಿದ್ದಾರೆ. ವಿದ್ಯಾರ್ಥಿಗಳು ಗೊಂದಲ ಮಾಡಿಕೊಳ್ಳದೆ, ನಕಲಿ ಪ್ರಶ್ನೆಪತ್ರಿಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪರೀಕ್ಷೆ ಎದುರಿಸಬೇಕಿದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಇನ್ನಾದರೂ ಕಿಡಗೇಡಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.