ಇತ್ತೀಚಿನ ಸುದ್ದಿ

ಮಾ.9 ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ 3 ಗಂಟೆಗಳ ಕಾಲ ಈ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತ

ಮಾರ್ಚ್ 9, ಭಾನುವಾರ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಬೆಂಗಳೂರಿನ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. ಹಳಿ ನಿರ್ವಹಣಾ ಕಾರ್ಯಕ್ಕಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್​​ ಸಿಎಲ್​ ತಿಳಿಸಿದೆ.ಕ್ಯೂಆರ್ ಟಿಕೆಟ್ ಖರೀದಿ ನಿಷ್ಕ್ರಿಯಗೊಳಿಸಲಾಗಿದೆ.ಹಸಿರು ಮಾರ್ಗದ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಬೇಕು ಎಂದು ಬಿಎಂಆರ್​ ಸಿಎಲ್​ ಮನವಿ ಮಾಡಿದೆ.

ಭಾನುವಾರ (ಮಾರ್ಚ್​.09) ರಂದು ನೇರಳೆ ಮಾರ್ಗದ (Purple Line) ಮಾಗಡಿ ರಸ್ತೆ (Magadi Road) ಮತ್ತು ಎಂಜಿ ರಸ್ತೆ (MG Road) ಮೆಟ್ರೋ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ (Namma Metro) ಸಂಚಾರ ಬೆಳಗ್ಗೆ 7 ಗಂಟೆಯಿಂದ 10ಗಂಟೆಯವರೆಗೆ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.ನಮ್ಮ ಮೆಟ್ರೋ ನಿಗಮವು ಅಂದು ನೇರಳ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಬೆಳಿಗೆ 07:00 ರಿಂದ 10:00 ಗಂಟೆಯವರೆಗೆ (ಮೂರು ಗಂಟೆಗಳ ಕಾಲ) ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ಯಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದೆ.ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸ‌ರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ ಎಂದು ಮಾಹಿತಿ ನೀಡಿದೆ.ಬೆಳಗ್ಗೆ 10.00 ಗಂಟೆಯವರೆಗೆ ಈ ರದ್ದತಿಯ ಕಾರಣದಿಂದಾಗಿ, ಕ್ಯೂಆರ್ ಟಿಕೆಟ್‌ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೇರಳೆ ಮಾರ್ಗದಲ್ಲಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್​ನಲ್ಲಿ ರೈಲು ಲಭ್ಯವಿರುವುದಿಲ್ಲವಾದ್ದರಿಂದ, ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್ ಹಾಗೂ ಟೋಕನ್​ಗಳನ್ನು ಖರೀದಿಸದಂತೆ ಬಿಎಂಆರ್​ಸಿಎಲ್​ ಸೂಚಿಸಿದೆ.ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ಮತ್ತು ಮಾಗಡಿ ರಸ್ತೆ ನಡುವೆ, ಹಾಗೂ ಎಂಜಿ ರಸ್ತೆ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವೆ, ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗುತ್ತವೆ ಮತ್ತು ಮೇಲಿನ ಅವಧಿಯಲ್ಲಿ ವೇಳಾಪಟ್ಟಿಯ ಪ್ರಕಾರ ಲಭ್ಯವಿರುತ್ತವೆ ಎಂದಿದೆ.ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ರೈಲುಗಳ ಸೇವೆಗಳು ನಿಗದಿತ ಸಮಯ ಬೆಳಿಗ್ಗೆ 7.00 ಗಂಟೆಗೆ ಪ್ರಾರಂಭವಾಗುತ್ತವೆ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಬೇಕೆಂದು ಬಿಎಂಆರ್​ಸಿಎಲ್​ ಕೋರಿದೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ಬಿಎಂಆರ್​ಸಿಎಲ್​ ವಿಷಾದಿಸಿದೆ.

Related Articles

Leave a Reply

Your email address will not be published. Required fields are marked *

Back to top button