ಪಶ್ಚಿಮ ಬಂಗಾಳದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ನಾಲ್ಕು ಮಕ್ಕಳು ಸೇರಿ 7 ಮಂದಿ ಸಾವು

ಕೋಲ್ಕತ್ತಾ, ಏಪ್ರಿಲ್ 1: ಪಶ್ಚಿಮ ಬಂಗಾಳದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ(Cylinder Blast)ಗೊಂಡು ನಾಲ್ವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಮೊದಲು ಪಟಾಕಿ ಸ್ಫೋಟಗೊಂಡಿದ್ದು, ಅದರಿಂದಾಗಿ ಸಿಲಿಂಡರ್ಗೆ ಬೆಂಕಿ ತಗುಲಿ ಅದು ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಧೋಲಾಹತ್ ಪ್ರದೇಶದ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದ್ದು, ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಕಟ್ಟಡದಾದ್ಯಂತ ಹರಡಿತು.ನಾಲ್ವರು ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಮನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು, ಸೋಮವಾರ ಸಂಜೆ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದ್ದು, ನಂತರ ಬೆಂಕಿಯು ಕಟ್ಟಡವನ್ನು ಆವರಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿದ್ದರು.
ಈ ಕುಟುಂಬವು ವರ್ಷಗಳಿಂದ ಪಟಾಕಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ವರದಿಗಳ ಪ್ರಕಾರ, ಒಟ್ಟು 11 ಸದಸ್ಯರು ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ 4 ಸದಸ್ಯರು ಇನ್ನೂ ಕಾಣೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದ್ದು, ಏಳು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕಳೆದ ತಿಂಗಳು ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಬಲಿಯಾದವರು ಕಾರ್ಖಾನೆಯ ಸಿಬ್ಬಂದಿ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ಸ್ಫೋಟದ ನಿಖರವಾದ ಕಾರಣವನ್ನು ನಿರ್ಧರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲೂ ಅಂಥದ್ದೇ ಘಟನೆ ನಡೆದಿತ್ತು ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ 45 ವರ್ಷದ ವ್ಯಕ್ತಿ ಹಾಗೂ ಅವರ ಪತ್ನಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿರುವ ಘಟನೆ ಬೆಳಗ್ಗೆ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸಿದ್ದೇಶ್ ಹಾಗೂ ಅವರ 44 ವರ್ಷದ ಪತ್ನಿ ಶಿಶಿಲಾ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಸಿದ್ದೇಶ್ ಟೀ ಮಾಡಲು ಕಿಚನ್ ಗೆ ಹೋಗಿದ್ದು, ಗ್ಯಾಸ್ ಸ್ಟೌವ್ ಹಚ್ಚಿದ್ದಾರೆ. ಸಿಲಿಂಡರ್ ಹಠಾತ್ತನೇ ಸ್ಫೋಟಿಸಿದ್ದು, ಅವರು ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ.ಸ್ಪೋಟಕ್ಕೆ ಅನಿಲ ಸೋರಿಕೆ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಸಿದ್ದೇಶ್ ದೇಹದ ಶೇ. 45 ರಷ್ಟು ಭಾಗ ಸುಟ್ಟ ಗಾಯಗಳಾಗಿದ್ದರೆ, ಅವರ ಪತ್ನಿಗೆ ಶೇ. 90 ರಷ್ಟು ಭಾಗ ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.