ವಿದೇಶ
Trending

ಪ್ರತಿಸುಂಕ ಸಮರದಲ್ಲಿ ಜಯಿಸುವರೇ ಡೊನಾಲ್ಡ್‌ ಟ್ರಂಪ್‌?

ನ್ಯೂಯಾರ್ಕ್: ಏಪ್ರಿಲ್‌ 2 ಅನ್ನು ‘ಅಮೆರಿಕದ ವಿಮೋಚನಾ ದಿನ’ ಎಂದು ಬಣ್ಣಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ತಮ್ಮ ದೇಶದ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಆಮದು ಸುಂಕ ವಿಧಿಸುತ್ತಿರುವ ದೇಶಗಳಿಗೆ ಸರಾಸರಿ ಶೇ. 20ರಷ್ಟು ಪ್ರತಿಸುಂಕ ವಿಧಿಸಲು ಸಜ್ಜಾಗಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರು ಬುಧವಾರ (ಏಪ್ರಿಲ್‌ 2) ಪ್ರತಿಸುಂಕ ಘೋಷಣೆ ಮಾಡಲಿದ್ದಾರೆ. ಇದಾದ ಬೆನ್ನಿಗೆ ಭಾರತ ಸೇರಿದಂತೆ ಕೆಲವು ದೇಶಗಳು ಈಗಾಗಲೇ ಅಮೆರಿಕ ಉತ್ಪನ್ನಗಳ ಮೇಲಿನ ಆಮದು ಸುಂಕ ಇಳಿಸುವ ಮುನ್ಸೂಚನೆ ನೀಡಿವೆ. ಐರೋಪ್ಯ ಒಕ್ಕೂಟ ಅಮೆರಿಕದ ಕಾರುಗಳ ಮೇಲಿನ ಸುಂಕವನ್ನು ಶೇ. 2.5ಕ್ಕೆ ಇಳಿಸಿದೆ. ಹಲವು ದೇಶಗಳು ಇದೇ ಹಾದಿಯಲ್ಲಿವೆ. ಹೀಗಾಗಿ ಟ್ರಂಪ್‌ ಘೋಷಣೆಯನ್ನು ಜಗತ್ತು ಎದುರು ನೋಡುತ್ತಿದೆ.

ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್‌ ಲೀವಿಟ್‌ ಅವರು ಮಂಗಳವಾರ ಅನ್ಯ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆ ಪ್ರಮಾಣವನ್ನು ಬಯಲು ಮಾಡಿದ್ದಾರೆ. ”ಅಮೆರಿಕದ ಡೈರಿ ಉತ್ಪನ್ನಗಳ ಮೇಲೆ ಐರೋಪ್ಯ ಒಕ್ಕೂಟ ಶೇ. 50ರಷ್ಟು ಮತ್ತು ಅಮೆರಿಕದ ಅಕ್ಕಿಯ ಮೇಲೆ ಜಪಾನ್‌ ಶೇ. 700 ರಷ್ಟು ಸುಂಕ ವಿಧಿಸಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ. 100ರಷ್ಟು ಹಾಗೂ ಅಮೆರಿಕದ ಬೆಣ್ಣೆ ಮತ್ತು ಚೀಸ್‌ ಮೇಲೆ ಕೆನಡಾ ಶೇ. 300 ಸುಂಕ ವಿಧಿಸಿದೆ,” ಎಂದು ಅವರು ಹೇಳಿದ್ದಾರೆ.

”ಯಾವ ದೇಶದ ಮೇಲೆ ಎಷ್ಟು ಪ್ರತಿಸುಂಕ ವಿಧಿಸಬೇಕು ಎನ್ನುವುದನ್ನು ಅಧ್ಯಕ್ಷರೇ ನಿರ್ಧರಿಸುತ್ತಾರೆ ಮತ್ತು ಬುಧವಾರ ಅವರೇ ಘೋಷಣೆ ಮಾಡುತ್ತಾರೆ,” ಎಂದು ಕ್ಯಾರೋಲಿನ್‌ ಲೀವಿಡ್‌ ತಿಳಿಸಿದ್ದಾರೆ.

ಆದರೆ ಆರ್ಥಿಕ ತಜ್ಞರು ಡೊನಾಲ್ಡ್‌ ಟ್ರಂಪ್‌ ನಡೆ ಕುರಿತು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ”ಏಪ್ರಿಲ್‌ 2ರಂದೇ ಸುಂಕ ಅಂತಿಮವಾಗುತ್ತದೆ ಎನ್ನಲಾಗದು. ವಿವಿಧ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆಗೆ ವೇದಿಕೆಯನ್ನು ಡೊನಾಲ್ಡ್‌ ಟ್ರಂಪ್‌ ನಿರ್ಮಿಸಬಹುದು,” ಎಂದು ಹೂಡಿಕೆ ತಜ್ಞ ಮೈಕ್‌ ವಿಲ್ಸನ್‌ ಹೇಳಿದ್ದಾರೆ.

“ಪರಸ್ಪರ ಮಾತುಕತೆಗೆ ವಾಷಿಂಗ್ಟನ್‌ ಮುಕ್ತವಾಗಿದೆ,” ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ”ಟ್ರಂಪ್‌ ಪ್ರತಿಸುಂಕ ಘೋಷಣೆ ತೀರ್ಮಾನ ಜಾಗತಿಕ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ,” ಎಂದು ಅನೇಕ ಹೂಡಿಕೆ ತಜ್ಞರು ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button