ಇದು ನನ್ನ ಊರು.. ನನ್ನ ಗ್ರೌಂಡ್: ಪೋಸ್ಟ್ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಮಾತು ಕೇಳಿ ಕೊಹ್ಲಿ ಸೈಲೆಂಟ್

ಬೆಂಗಳೂರು (ಏ. 11): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 24 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru vs Delhi Capitals) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಕೆಎಲ್ ರಾಹುಲ್ ಅವರ ಅದ್ಭುತ ಅಜೇಯ ಇನ್ನಿಂಗ್ಸ್ (53 ಎಸೆತಗಳಲ್ಲಿ 93 ರನ್) ಡೆಲ್ಲಿ ತಂಡಕ್ಕೆ ನಾಲ್ಕನೇ ಗೆಲುವಿನ ಅವಕಾಶ ಮಾಡಿಕೊಟ್ಟಿತು. ಪವರ್ ಪ್ಲೇನಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದರೂ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ರಾಹುಲ್ ಸೆಟಲ್ ಆಗುತ್ತಿದ್ದಂತೆ ಬೆಂಗಳುರು ಬೌಲರ್ಗಳ ಚೆಂಡಾಡಿದರು. ಇದಕ್ಕಾಗಿ ಇವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ರಾಹುಲ್ ಏನು ಹೇಳಿದರು ನೋಡಿ.
‘‘ಇದು ಕಠಿಣ ವಿಕೆಟ್ ಆಗಿತ್ತು ಆದರೆ 20 ಓವರ್‌ಗಳ ಕಾಲ ವಿಕೆಟ್ ಹಿಂದೆ ನಾನು ಇದ್ದಿದ್ದು, ಪಿಚ್ ಅನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಯಾವ ಹೊಡೆತಗಳನ್ನು ಆಡಬೇಕೆಂದು ನನಗೆ ತಿಳಿದಿತ್ತು ಮತ್ತು ನಾನು ಉತ್ತಮ ಆರಂಭವನ್ನು ಮಾಡಲು ಬಯಸಿದ್ದೆ. ಈ ರೀತಿಯ ವಿಕೆಟ್‌ನಲ್ಲಿ ನನಗೆ ಎಲ್ಲಿ ಆಡಬೇಕೆಂದು ತಿಳಿದಿತ್ತು. ನೀವು ದೊಡ್ಡ ಸಿಕ್ಸ್ ಹೊಡೆಯಲು ಬಯಸಿದರೆ ಅದನ್ನು ಎಲ್ಲಿ ಹೊಡೆಯಬೇಕು?, ಬ್ಯಾಟ್ಸ್‌ಮನ್‌ಗಳು ಹೇಗೆ ಔಟಾಗುತ್ತಿದ್ದಾರೆ ಮತ್ತು ಅವರು ಎಲ್ಲಿ ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದಾರೆ ಎಂಬುದನ್ನು ನಾನು ವಿಕೆಟ್ ಕೀಪಿಂಗ್ ಮೂಲಕ ತಿಳಿದುಕೊಳ್ಳಲು ಸಾಧ್ಯವಾಯಿತು’’ ಎಂದು ತಮ್ಮ ಬ್ಯಾಟಿಂಗ್ ರಹಸ್ಯ ತಿಳಿಸಿದ್ದಾರೆ.
‘‘ಕ್ಯಾಚ್ ತಪ್ಪಿಸಿಕೊಂಡಿದ್ದರಿಂದ ಅದೃಷ್ಟವೂ ನನಗೆ ಬೆಂಬಲ ನೀಡಿತು. ಇದು ನನ್ನ ನೆಲ, ನನ್ನ ಊರು ಮತ್ತು ನನಗೆ ಇಲ್ಲಿಯ ಬಗ್ಗೆ ಇತರರಿಗಿಂತ ಚೆನ್ನಾಗಿ ತಿಳಿದಿದೆ. ನಾನು ವಿಭಿನ್ನ ರೀತಿಯ ವಿಕೆಟ್‌ಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಅದನ್ನು ಸಂಭ್ರಮಿಸಲು ಬಳಸುತ್ತೇನೆ. ಇಲ್ಲಿ ನನಗೆ ಒಂದು ರನ್ ಎಲ್ಲಿ ಸಿಗುತ್ತದೆ ಮತ್ತು ಆರು ರನ್ ಎಲ್ಲಿ ಸಿಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ’’ ಎಂಬುದು ಕೆಎಲ್ ರಾಹುಲ್ ಮಾತು.
ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆದರೂ ಆರಂಭಿಕ ವಿಕೆಟ್‌ಗಳು ಪತನಗೊಂಡ ನಂತರ ಇನ್ನಿಂಗ್ಸ್ ಕುಂಟುತ್ತಾ ಸಾಗಿತು. ಈ ಮೂಲಕ ಆರ್‌ಸಿಬಿ ತಂಡ ಹೇಗೋ ನಿಗದಿತ 20 ಓವರ್‌ಗಳಲ್ಲಿ 163 ರನ್‌ಗಳ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
ಗುರಿಯನ್ನು ಬೆನ್ನಟ್ಟುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. 58 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಆದರೆ ಅದಾದ ನಂತರ ಕೆಎಲ್ ರಾಹುಲ್ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸುವ ಮೂಲಕ ಪಂದ್ಯವನ್ನು ಏಕಪಕ್ಷೀಯವಾಗಿಸಿದರು. ಈ ಸಮಯದಲ್ಲಿ, ರಾಹುಲ್‌ಗೆ ಟ್ರಿಸ್ಟಾನ್ ಸ್ಟಬ್ಸ್‌ನಿಂದ ಉತ್ತಮ ಬೆಂಬಲ ದೊರೆಯಿತು. ಈ ರೀತಿಯಾಗಿ, ಆರ್‌ಸಿಬಿ ತಂಡವನ್ನು ಸ್ಥಳೀಯ ಹುಡುಗ ರಾಹುಲ್ ಅವರದ್ದೇ ತವರು ನೆಲದಲ್ಲಿ ಸೋಲಿಸಿದರು.