
ಧಾರವಾಡ: ಬೇಸಿಗೆ ಶುರುವಾಗಿದೆ. ನೀರಿಗಾಗಿ ಅಲ್ಲಲ್ಲಿ ಹಾಹಾಕಾರ ಎದುರಾಗಿದೆ. ನಾಡಿನಲ್ಲಿರುವ ಜನರಿಗೆ ಈ ರೀತಿಯಾದರೆ ಇನ್ನು ಕಾಡಿನಲ್ಲಿರುವ ಪ್ರಾಣಿಗಳ ಸ್ಥಿತಿ ಏನು ಎಂಬುದನ್ನು ಅರಿತ ಅರಣ್ಯ ಇಲಾಖೆ ವನ್ಯಮೃಗಗಳಿಗೆ ಕಾಡಿನಲ್ಲಿ ನೀರಿನ ವ್ಯವಸ್ಥೆ ಮಾಡಿದೆ. ಆ ಮೂಲಕ ವನ್ಯಮೃಗಗಳ ನೀರಿನ ದಾಹ ಇಂಗಿಸುವ ಕೆಲಸಕ್ಕೆ ಮುಂದಾಗಿದೆ.ಹೌದು, ಜಿಲ್ಲೆಯಲ್ಲಿ ಬಿಸಿಲು ನೆತ್ತಿಯನ್ನು ಸುಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಜನರು ಮತ್ತು ಜಾನುವಾರುಗಳಿಗೇನೋ ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತದೆ . ಆದರೆ, ಕಾಡಿನಲ್ಲಿಯೇ ಬದುಕುವ ಜೀವಿಗಳಿಗೆ ಇದೀಗ ನೀರಿನ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಮುಂದಿನ ಎರಡು ತಿಂಗಳವರಿಗಂತೂ ಕಾಡಿನಲ್ಲಿನ ಜಲಮೂಲಗಳೆಲ್ಲ ಬತ್ತಿ ಹೋಗಿ, ವನ್ಯಮೃಗಗಳು ಮತ್ತು ಪಕ್ಷಿಗಳು ಪರದಾಡುತ್ತವೆ. ಈ ಕಾರಣಕ್ಕೆ ಧಾರವಾಡದ ಅರಣ್ಯ ಇಲಾಖೆ ವನ್ಯಜೀವಿಗಳಿಗಾಗಿಯೇ ನೀರಿನ ವ್ಯವಸ್ಥೆ ಮಾಡಿದೆ.
ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನಲ್ಲಿರುವ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಟ್ಯಾಂಕ್ ಹಾಗೂ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಿ, ಅವುಗಳನ್ನು ತುಂಬಿಸುವ ಮೂಲಕ ವನ್ಯಮೃಗಗಳ ದಾಹ ಇಂಗಿಸುತ್ತಿದ್ದಾರೆ. ನೀರು ಖಾಲಿಯಾಗುತ್ತಿದ್ದಂತೆ ಟ್ಯಾಂಕರ್ಗಳ ಮೂಲಕ ಮತ್ತೆ ಟ್ಯಾಂಕ್ ಹಾಗೂ ಕೆರೆಗಳನ್ನು ತುಂಬಿಸಿ, ವನ್ಯಮೃಗಗಳ ತೃಷೆ ತಣಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಗುಂಡಿ ತೋಡಿ, ಅದಕ್ಕೆ ಪ್ಲಾಸ್ಟಿಕ್ ಹಾಕಿ ಅದರಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಆದರೆ, ಹಾಗೆ ಮಾಡಿದ್ದ ಗುಂಡಿಯಲ್ಲಿ ಎರಡು ದಿನಕ್ಕಿಂತ ಹೆಚ್ಚಿಗೆ ನೀರು ನಿಲ್ಲುತ್ತಿರಲಿಲ್ಲ. ಏಕೆಂದರೆ ಯಾವುದಾದರೊಂದು ಪ್ರಾಣಿ ಬಂದು ನೀರು ಕುಡಿದು ಹೋದರೆ ಸಾಕು, ಅವುಗಳ ಉಗುರು ತಾಗಿ ಪ್ಲಾಸ್ಟಿಕ್ ಹರಿದು, ನೀರು ಭೂಮಿಯಲ್ಲಿ ಇಂಗಿ ಹೋಗುತ್ತಿತ್ತು. ಅಲ್ಲದೇ ಪ್ರಾಣಿಗಳು ನೀರು ಕುಡಿಯಬೇಕಾದರೆ ಗುಂಡಿಯೊಳಗೆ ಇಳಿದೇ ಕುಡಿಯಬೇಕಿತ್ತು. ಇದರಿಂದಾಗಿ ಜಿಂಕೆ, ಮೊಲ, ಮಂಗಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಗುಂಡಿಯೊಳಗೆ ಇಳಿದಾಗ ಉಳಿದ ವನ್ಯಮೃಗಗಳು ದಾಳಿ ಮಾಡುವ ಭಯ ಕಾಡುತ್ತಿತ್ತು. ಹೀಗಾಗಿ ಪ್ರಾಣಿಗಳು ಗುಂಡಿಯೊಳಗೆ ಇಳಿಯೋ ಧೈರ್ಯ ಮಾಡುತ್ತಿರಲಿಲ್ಲ. ಇದನ್ನು ಅರಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲವಾರು ಸಣ್ಣ ಸಣ್ಣ ನೀರಿನ ತೊಟ್ಟಿಯನ್ನು ಸಿಮೆಂಟ್ನಲ್ಲಿಯೇ ನಿರ್ಮಾಣ ಮಾಡಿಸಿದ್ದಾರೆ.
ಇನ್ನು ಅನೇಕರು ಸಣ್ಣ ಪ್ರಾಣಿಗಳಿಗೋಸ್ಕರ ಅಂತಾನೇ ಸಿಮೆಂಟ್ನಿಂದ ಮಾಡಿದ ಹಲವಾರು ಸಣ್ಣ ಸಣ್ಣ ಟ್ಯಾಂಕ್ಗಳನ್ನು ನೀಡಿದ್ದಾರೆ. ಅವುಗಳಿಗೆ ನಿತ್ಯವೂ ನೀರು ತುಂಬಿಸುವುದರಿಂದ ಮಂಗ, ಅಳಿಲು, ನರಿಯಂಥ ಪ್ರಾಣಿಗಳು ಬಂದು ನೀರು ಕುಡಿದು ಹೋಗುತ್ತಿವೆ. ಅರಣ್ಯ ಇಲಾಖೆಯ ಈ ಕ್ರಮ ಪ್ರಾಣಿ ಪ್ರಿಯರಿಗೆ ಸಾಕಷ್ಟು ಸಂತೋಷ ತಂದಿದೆ.