Country
Trending

ಕುಲ್ಗಾಮ್​ ಎನ್​ಕೌಂಟರ್: ಇಬ್ಬರು ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ಎರಡನೇ ದಿನವಾದ ಇಂದೂ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಮುಂದುವರೆದಿದೆ. ರಾತ್ರಿ ಸ್ವಲ್ಪ ಕಾಲದವರೆಗೆ ಗುಂಡಿನ ದಾಳಿ ಮುಂದುವರೆದಿತ್ತು. ಬಳಿಕ ಇಂದು ಬೆಳಗ್ಗೆಯಿಂದ ಪುನಾರಂಭಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎನ್​ಕೌಂಟರ್​ನಲ್ಲಿ ಇದುವರೆಗೆ ಪಾಕಿಸ್ತಾನಿ ಪ್ರಜೆ ಎಂದು ಹೇಳಲಾದ ವ್ಯಕ್ತಿ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ, ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸೋಮವಾರದಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಸೇನಾ ಮೇಜರ್​ ಕೂಡ ಗಾಯಗೊಂಡಿದ್ದಾರೆ.

ಕುಲ್ಗಾಮ್‌ನ ಗುಡಾರ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಕುರಿತು ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಎನ್‌ಕೌಂಟರ್ ನಡೆದಿದೆ. ಭದ್ರತಾ ಸಿಬ್ಬಂದಿ ಶೋಧ ಶುರು ಮಾಡುತ್ತಿದ್ದಂತೆ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾರೆ.

ಕಾರ್ಯಾಚರಣೆಯ ವೇಳೆ ಸಬ್ ಪರ್ಭಾತ್ ಗೌರ್ ಮತ್ತು ಲ್ಯಾನ್ಸ್ ನಾಯಕ್ ನರೇಂದರ್ ಸಿಂಧು ಎಂಬ ಇಬ್ಬರು ಯೋಧರು ಮತ್ತು ಸೇನಾ ಮೇಜರ್ ಒಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಗೌರ್​ ಮತ್ತು ಸಿಂಧು ಹುತಾತ್ಮರಾಗಿದ್ದು, ಅಧಿಕಾರಿಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಚಿನಾರ್​ ಕಾರ್ಪ್ಸ್​, “ಧೈರ್ಯಶಾಲಿಗಳಾದ ಸಬ್ ಪರ್ಭಾತ್ ಗೌರ್ ಮತ್ತು ಎಲ್/ಎನ್ಕೆ ನರೇಂದರ್ ಸಿಂಧು ಅವರ ತ್ಯಾಗವನ್ನು ದೇಶ ಗೌರವಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ” ಎಂದು ತಿಳಿಸಿದೆ.

ಮುಂದುವರೆದು, “ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕುಲ್ಗಾಮ್‌ನ ಗುಡ್ಡಾರ್ ಅರಣ್ಯದಲ್ಲಿ ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದವು. ಪ್ರಾರಂಭಿಕ ವರದಿಯಲ್ಲಿ ಸ್ಥಳೀಯ ಭಯೋತ್ಪಾದಕನನ್ನು ತಟಸ್ಥಗೊಳಿಸಲಾಗಿದ್ದು, ಎರಡನೇ ಉಗ್ರ ವಿದೇಶಿಗನಾಗಿದ್ದು, ಆತನ ಕೋಡ್​ ಹೆಸರು ರೆಹಮನ್​ ಬಾಯಿ ಆಗಿದೆ” ಎಂದು ತಿಳಿಸಿದ್ದಾರೆ.

ಎನ್​ಕೌಂಟರ್​ ಸಾಗುತ್ತಿರುವ ಗುಡ್ಡಾರ್​ ಪ್ರದೇಶಕ್ಕೆ ಡಿಜಿಪಿ ನಲಿನ್​ ಪ್ರಭಾತ್​ ಭೇಟಿ ನೀಡಿದ್ದು, ಸೇನಾ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button