Country
Trending

ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರ: ಪಶ್ಚಿಮ ಬಂಗಾಳದಲ್ಲಿ 110ಕ್ಕೂ ಅಧಿಕ ಜನರ ಬಂಧನ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ ಪ್ರಕರಣದ ಸಂಬಂಧ 110ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಹೊಸ ಶಾಸನವನ್ನು ವಿರೋಧಿಸಿ ಶುಕ್ರವಾರ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸ್ ವ್ಯಾನ್‌ಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟವೂ ನಡೆದು, ರಸ್ತೆ ಸಂಚಾರ ಬಂದ್​ ಮಾಡಲಾಗಿತ್ತು. ಈ ಸಂಬಂದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಹಿಂಸಾಚಾರ ಸಂಬಂಧ ಸುತಿಯಲ್ಲಿ ಸುಮಾರು 70 ಜನರನ್ನು ಮತ್ತು ಸಂಸರ್‌ಗಂಜ್‌ನಿಂದ 41 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂಸಾಚಾರ ಪೀಡಿತ ಸ್ಥಳಗಳಲ್ಲಿ ಶನಿವಾರ ಬೆಳಗ್ಗೆ ಪರಿಸ್ಥಿತಿ ಉದ್ವಿಗ್ನವಾಗಿತ್ತು, ಆದರೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಹಿಂಸಾಚಾರದಿಂದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಘಟನಾ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ, ಇಂಟರ್​​ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಸುತಿ ಮತ್ತು ಸಂಸೇರ್‌ಗಂಜ್ ಪ್ರದೇಶಗಳಲ್ಲಿ ಪೊಲೀಸ್​​ ಗಸ್ತು ಏರ್ಪಡಿಸಲಾಗಿದೆ. ಯಾರೂ ಎಲ್ಲಿಯೂ ಗುಂಪುಗೂಡಲು ಅವಕಾಶವಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನಕ್ಕೂ ನಾವು ಅವಕಾಶ ನೀಡುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಬರುವ ವದಂತಿಗಳತ್ತ ಗಮನ ಕೊಡಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ. ಈ ಮಧ್ಯೆ ಸುತಿಯಲ್ಲಿ ನಡೆದ ಘರ್ಷಣೆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಗಾಯಗೊಂಡ ಯುವಕನನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯನ್ನು ಖಂಡಿಸಿರುವ ಪ್ರತಿಪಕ್ಷ ಬಿಜೆಪಿ, ಮಮತಾ ಬ್ಯಾನರ್ಜಿ ಸರ್ಕಾರವು ಪರಿಸ್ಥಿತಿ ನಿಭಾಯಿಸಲು ಅಸಮರ್ಥವಾಗಿದ್ದರೆ, ಕೇಂದ್ರದ ನೆರವು ಪಡೆಯಲಿ ಎಂದು ಆಗ್ರಹಿಸಿದೆ.

“ಇದು ಪ್ರತಿಭಟನೆಯಲ್ಲ, ಬದಲಾಗಿ ಪೂರ್ವಯೋಜಿತ ಹಿಂಸಾಚಾರ. ನಮ್ಮ ಸಮಾಜದ ಇತರ ಸಮುದಾಯಗಳ ಮೇಲೆ ತಮ್ಮ ಪ್ರಾಬಲ್ಯ ಪ್ರತಿಪಾದಿಸಲು ಮತ್ತು ಭಯ ಮೂಡಿಸಲು, ಅವ್ಯವಸ್ಥೆ ಹರಡಲು ಪ್ರಯತ್ನಿಸುತ್ತಿರುವ ಶಕ್ತಿಗಳಿಂದ ಪ್ರಜಾಪ್ರಭುತ್ವ ಮತ್ತು ಆಡಳಿತದ ಮೇಲೆ ನಡೆದ ದಾಳಿ” ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ X ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಸಾರ್ವಜನಿಕ ಆಸ್ತಿ ನಾಶವಾಗಿದೆ, ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ. ಭಯದ ವಾತಾವರಣ ಸೃಷ್ಟಿಸಲಾಗಿದೆ. ಘಟನೆ ಬಗ್ಗೆ ಮಮತಾ ಬ್ಯಾನರ್ಜಿ ಸರ್ಕಾರದ ಮೌನ ವಹಿಸಿರುವುದು ಅದನ್ನು ಕಿವುಡಾಗಿಸಿದೆ” ಎಂದು ಅವರು ಟೀಕಿಸಿದ್ದಾರೆ.ಹಿಂಸಾಚಾರದ ಹಿಂದಿರುವವರನ್ನು ಪತ್ತೆ ಮಾಡಿ ಬಂಧಿಸಬೇಕು. ಕಾನೂನು ಪ್ರಕಾರ ಕಠಿಣ ಕಾಯ್ದೆ ಅಡಿ ವಿಚಾರಣೆಗೆ ಒಳಪಡಿಸಬೇಕು ಎಂದು ಸುವೆಂದು ಅಧಿಕಾರಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button