ಕ್ರೀಡೆ
Trending

ವಾಟ್ ಎ ರಿವ್ಯೂವ್ ಜಿತೇಶ್..!; ಆರ್​ಸಿಬಿ ಸೋಲುವ ಪಂದ್ಯ ಗೆದ್ದಿದ್ದು ಇಲ್ಲೇ

RCB vs RR: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಜಿತೇಶ್ ಶರ್ಮಾ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಉತ್ತಮ ಫಾರ್ಮ್‌ನಲ್ಲಿದ್ದ ಧ್ರುವ್ ಜುರೆಲ್ ಅವರನ್ನು ಜಿತೇಶ್ ತೆಗೆದುಕೊಂಡ ಡಿಆರ್‌ಎಸ್ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಹಿಸಿತು.

ಆರ್​ಸಿಬಿ ವಿರುದ್ಧದ ಪಂದ್ಯವನ್ನು 11 ರನ್​​ಗಳಿಂದ ಸೋತಿರುವ ರಾಜಸ್ಥಾನ್ ರಾಯಲ್ಸ್ (RCB vs RR) ತಂಡಕ್ಕೆ 2025 ರ ಐಪಿಎಲ್ (IPL 2025) ಇನ್ನು ಮುಂದೆ ಕೇವಲ ಔಪಚಾರಿಕವಾಗಿದೆ. ಏಕೆಂದರೆ ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ್ ಪ್ರಸ್ತುತ 8ನೇ ಸ್ಥಾನದಲ್ಲಿದ್ದು, ತಂಡದ ಪ್ರದರ್ಶನವನ್ನು ನೋಡಿದರೆ, ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅಸಾಧ್ಯದ ಮಾತಾಗಿದೆ. ಹೀಗಾಗಿಯೇ ರಾಜಸ್ಥಾನ್ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಪ್ರಮುಖ ಕಾರಣ ಎನ್ನಬಹುದು. ಸತತ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ತಾನು ಮಾಡಿದ ತಪ್ಪುಗಳಿಂದಲೇ ಸೋತಿದೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ್ ಅದೇ ತಪ್ಪನ್ನು ಮಾಡಿ ಸೋತಿತ್ತಾದರೂ ಇಲ್ಲಿ ಆರ್​ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ (Jitesh Sharma) ತೋರಿದ ಚಾಣಾಕ್ಷತೆ ಆರ್​ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು.

ಆರ್​ಸಿಬಿ ನೀಡಿದ 205 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್​ಗೆ ನಿರೀಕ್ಷೆಗೂ ಮೀರಿದ ಆರಂಭ ನೀಡುವಲ್ಲಿ ಆರಂಭಿಕರು ಯಶಸ್ವಿಯಾದರು. ತಂಡ ಕೇವಲ 9 ಓವರ್​ಗಲ್ಲಿ 3 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತು. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ ರಾಜಸ್ಥಾನ್​ಗೆ ಮತ್ತೊಂದು ಸೋಲಿನ ಆಘಾತ ನೀಡಿತು. ಅದರಲ್ಲೂ 18ನೇ ಓವರ್​ನಲ್ಲಿ 22 ರನ್​ ಕಲೆಹಾಕಿ ರಾಜಸ್ಥಾನ್​ಗೆ ಗೆಲುವಿನ ಭರವಸೆ ಮೂಡಿಸಿದ್ದ ಧೃವ್ ಜುರೇಲ್ 19ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದ್ದು ತಂಡವನ್ನು ಸೋಲಿನ ದವಡೆಗೆ ಸಿಲುಕಿಸಿತು. ಆದಾಗ್ಯೂ ಈ ವಿಕೆಟ್​ನ ಕ್ರೆಡಿಟ್ ಆರ್​ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಸಲ್ಲಬೇಕು.

ವಾಸ್ತವವಾಗಿ ರಾಜಸ್ಥಾನ್ ಗೆಲುವಿಗೆ ಕೊನೆಯ 3 ಓವರ್​ಗಳಲ್ಲಿ 40 ರನ್ ಬೇಕಾಗಿದ್ದವು. ಈ ವೇಳೆ ಆರ್​ಸಿಬಿ ಮೇಲುಗೈ ಸಾಧಿಸಿತ್ತು. ಆದರೆ 18ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಬರೋಬ್ಬರಿ 22 ರನ್ ಬಿಟ್ಟುಕೊಟ್ಟರು. ಈ ಓವರ್​ನಲ್ಲಿ ಜುರೇಲ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಆರ್​ಸಿಬಿಗೆ ಕಂಟಕವಾಗಿದ್ದರು. ಕೊನೆಯ 2 ಓವರ್​ಗಳಲ್ಲಿ 18 ರನ್ ಬೇಕಿದ್ದಾಗ ವಿಜಯಲಕ್ಷ್ಮಿ ರಾಜಸ್ಥಾನ್ ಪರ ವಾಲಿದ್ದಂತೆ ಕಾಣುತ್ತಿತ್ತು. ಆದರೆ 19ನೇ ಓವರ್​ನಲ್ಲಿ ದಾಳಿಗಿಳಿದ ಹೇಜಲ್​ವುಡ್ ಪಂದ್ಯವನ್ನು ಮತ್ತೆ ಆರ್​ಸಿಬಿಯತ್ತ ತಿರುಗಿಸಿದರು.

ಈ ಓವರ್​ನಲ್ಲಿ ಹೇಜಲ್​ವುಡ್ ಕೇವಲ 1 ರನ್​ ನೀಡಿ 2 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಜುರೇಲ್ ವಿಕೆಟ್ ಉರುಳಿಸುವ ಮೂಲಕ ಹೇಜಲ್​ವುಡ್​ ತಂಡದ ಗೆಲುವಿನ ಖಚಿತಪಡಿಸಿದರು. ಈ ವಿಕೆಟ್ ಉರುಳಿಸಿದ್ದು ಹೇಜಲ್​ವುಡ್ ಆದರೂ ವಿಕೆಟ್ ಕೀಪರ್ ಜಿತೇಶ್ ಅವರ ಚುರುಕುತನ ವಿಕೆಟ್ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿತು.

ವಾಸ್ತವವಾಗಿ ಹೇಜಲ್​ವುಡ್ 19ನೇ ಓವರ್​ನ 3ನೇ ಎಸೆತವನ್ನು ಯಾರ್ಕರ್ ಬೌಲ್ ಮಾಡಿದರು. ಈ ಎಸೆತವನ್ನು ಸಿಕ್ಸರ್​ಗಟ್ಟಲು ಧೃವ್ ಯತ್ನಿಸಿದರು. ಆದರೆ ಆ ಯತ್ನದಲ್ಲಿ ಅವರು ಸಫಲರಾಗಲಿಲ್ಲ. ಚೆಂಡು ನೇರವಾಗಿ ವಿಕೆಟ್ ಕೀಪರ್​ ಕೈಗೆ ಹೋಯಿತು. ಈ ಹಂತದಲ್ಲಿ ಎಲ್ಲರೂ ಇದು ಡಾಟ್ ಬಾಲ್ ಎಂದು ಭಾವಿಸಿದ್ದರು. ಆದರೆ ಚೆಂಡು ಧೃವ್ ಅವರ ಬ್ಯಾಟ್​ಗೆ ತಾಗಿದೆ ಎಂಬುದು ಜಿತೇಶ್​ಗೆ ಮಾತ್ರ ಗೊತ್ತಿತ್ತು. ಹೀಗಾಗಿ ಮೊದಲು ಅಂಪೈರ್ ಬಳಿ ಔಟ್​ಗೆ ಮನವಿ ಮಾಡಿದ ಜಿತೇಶ್, ಅಂಪೈರ್ ಔಟ್ ನೀಡದಿದ್ದಾಗ ರಜತ್​ಗೆ ರಿವ್ಯೂವ್ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಆರಂಭದಲ್ಲಿ ರಜತ್​ ಇದಕ್ಕೆ ಹಿಂದೇಟು ಹಾಕಿದರೂ, ಪಟ್ಟು ಬಿಡದ ಜಿತೇಶ್ ರಿವ್ಯೂವ್ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಕೊನೆಗೂ ಒತ್ತಡಕ್ಕೆ ಮಣಿದ ರಜತ್ ರಿವ್ಯೂವ್ ತೆಗೆದುಕೊಂಡರು. ರಿವ್ಯೂವ್​ನಲ್ಲಿ ಚೆಂಡು ಧೃವ್ ಅವರ ಬ್ಯಾಟ್​ಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಮೊದಲು ನಾಟೌಟ್ ನೀಡಿದ್ದ ಅಂಪೈರ್ ಆ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು. ಇತ್ತ ಧೃವ್ ಔಟಾದ ಬಳಿಕ ರಾಜಸ್ಥಾನದ ಸೋಲು ಕೂಡ ಖಚಿತವಾಯಿತು.

Related Articles

Leave a Reply

Your email address will not be published. Required fields are marked *

Back to top button