ನಗರಸಭೆ
Trending

ಬೆಂಗಳೂರಲ್ಲಿ ಕುಡಿಯೋ ನೀರಿನ ದರ ಲೀಟರ್‌ಗೆ 1 ಪೈಸೆ ಏರಿಕೆ ಅನಿವಾರ್ಯ!

ಬೆಂಗಳೂರು: ಕುಡಿಯೋ ನೀರಿನ ದರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಗೆ 1 ಪೈಸೆ ಏರಿಕೆ ಅನಿವಾರ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೆಲೆಯನ್ನು ಪ್ರತಿ ಲೀಟರ್ ಗೆ ಕನಿಷ್ಠ 1 ಪೈಸೆಯಷ್ಟು ಏರಿಕೆ ಮಾಡಲೇಬೇಕಾಗಿದೆ. ಬಡವರಿಗೆ ಹೊರೆಯಾಗದಂತೆ ನೀರಿನ ದರ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. ಜಲ ಮಂಡಳಿ ವಾರ್ಷಿಕವಾಗಿ 1 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದ್ದು, ಮುಂದಿನ ಹಂತಗಳ ಯೋಜನೆ ಕೈಗೆತ್ತಿಗೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯ. ಇದಕ್ಕೂ ಮುನ್ನ ಜನರಿಗೂ ನೀರಿನ ಪ್ರಾಮುಖ್ಯತೆ ಅರಿಯುವಂತೆ ಮಾಡಬೇಕು” ಎಂದು ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಕುರಿತಾಗಿ ಮಾತನಾಡಿದ ಅವರು, ದರ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದ ಬಗ್ಗೆ ಕೇಳಿದಾಗ, “ನಾವು ವಿದ್ಯುತ್ ಬೆಲೆ ಕಡಿಮೆ ಮಾಡಿದಾಗ ಅವರು ಮಾತನಾಡಲಿಲ್ಲ. ಅವರಿಗೆ ಜನರ ಮೇಲೆ ಕಾಳಜಿ ಇದ್ದರೆ, ಪೆಟ್ರೋಲ್, ಡೀಸೆಲ್, ಜಾನುವಾರುಗಳಿಗೆ ಹಾಕುವ ಬೂಸಾ ದರಗಳನ್ನು ಇಳಿಸಲಿ. ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆ ಕಡಿಮೆ ಇದೆ” ಎಂದು ಹೇಳಿದರು.

“ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು” ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.ಇನ್ನು ಕಸದ ವಿಚಾರವಾಗಿ ಹೇಳುವುದಾದರೆ, ಕೇಂದ್ರ ಬಿಜೆಪಿ ಸರ್ಕಾರ ಕಾನೂನು ಮಾಡಿದ್ದು, ಬಿಜೆಪಿ ಸರ್ಕಾರ 2022ರಲ್ಲೇ ದುಬಾರಿ ಸೆಸ್ ವಿಧಿಸಿದ್ದರು. ನಾವು ಅದನ್ನು ಕಡಿಮೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜಾಹೀರಾತು ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರ ನೋವು ನಮಗೂ ಅರಿವಾಗುತ್ತದೆ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅವರು ದಿನ ನಿತ್ಯ ಟೀಕೆ ಮಾಡಲಿ. ನಾವು ಜನರಿಗೆ ಉತ್ತಮ ಆಡಳಿತ ನೀಡಬೇಕು. ಕುಮಾರಸ್ವಾಮಿ ಅವರ ಸಹೋದರ ಹಾಲು ಒಕ್ಕೂಟಗಳ ಅಧ್ಯಕ್ಷರು. ಅವರಿಗೂ ಬೆಲೆ ಕಡಿಮೆ ಮಾಡುವ ಅವಕಾಶವಿದೆ. ಅವರು ಹಾಸನದಲ್ಲಿ ರೂ.4 ಕಡಿಮೆ ಮಾಡಿ ಹಾಲು ನೀಡಲಿ ನೋಡೋಣ. ರೈತರು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ನೀಡಲು ಈ ನಿರ್ಧಾರ ಮಾಡಿದ್ದೇವೆ” ಎಂದು ತಿಳಿಸಿದರು.


Related Articles

Leave a Reply

Your email address will not be published. Required fields are marked *

Back to top button