
ಬಲೂಚಿಸ್ತಾನ : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಸುತ್ತಮುತ್ತಲಿನ ಅನೇಕರು ಉದಾಹರಣೆಯಾಗಿ ನಿಲ್ಲುತ್ತಾರೆ. ಅಂತಹವರ ಸಾಲಿಗೆ ಕಾಶಿಶ್ ಚೌಧರಿ (kashish chaudhary) ಕೂಡ ಸೇರಿಕೊಳ್ಳುತ್ತಾರೆ. ಇವರು, ಬಲೂಚಿಸ್ತಾನ (balochistan) ದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತ (assistant commissioner) ರಾಗಿ ನೇಮಕಗೊಂಡಿದ್ದಾರೆ. ಇನ್ನು, ತನ್ನ ಸಾಧನೆಯ ಗುಟ್ಟಿನ ಬಗ್ಗೆ ಹಾಗೂ ತನ್ನ ಮುಂದಿನ ಗುರಿಯೇನು ಎನ್ನುವ ಬಗ್ಗೆ ಸಮಾ ಸುದ್ದಿ ವಾಹಿನಿ (Samaa News) ಜೊತೆಗೆ ಮಾತನಾಡಿ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ.ಕಾಶಿಶ್ ಚೌಧರಿ ಚಾಗೈ ಜಿಲ್ಲೆಯ ನೊಶ್ಕಿಯವಾರಾಗಿದ್ದು, ಅಷ್ಟೇನು ಅಭಿವೃದ್ಧಿ ಕಾಣದ ಊರು ಇವರದ್ದು. ಸೀಮಿತ ಸಂಪನ್ಮೂಲ, ಎಲ್ಲಾ ಸವಾಲುಗಳ ಹೊರತಾಗಿಯೂ ಬಲೂಚಿಸ್ತಾನ್ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಹಾಯಕ ಆಯುಕ್ತ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದು, ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿಯವರನ್ನು ಭೇಟಿಯಾಗಿದ್ದು, ಈ ವೇಳೆಯಲ್ಲಿ ತಾವು ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಸಮಾ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕಾಶಿಶ್, ಮೂರು ವರ್ಷಗಳ ನಿರಂತರ ಅಧ್ಯಯನದೊಂದಿಗೆ ಶುರುವಾದ ಈ ಪ್ರಯಾಣವು ಇಂದು ಈ ಹಂತಕ್ಕೆ ಬಂದು ತಲುಪಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪ್ರತಿನಿತ್ಯ ಸರಿಸುಮಾರು ಎಂಟು ಗಂಟೆಗಳ ಕಾಲ ತಯಾರಿ ನಡೆಸಿದ್ದೇನೆ. ಶಿಸ್ತು,ಕಠಿಣ ಪರಿಶ್ರಮವೇ ನನ್ನ ಸಾಧನೆಯ ಗುಟ್ಟು. ಸಮಾಜಕ್ಕೆ ಏನನ್ನಾದರೂ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಬೇಕೆನ್ನುವುದೇ ನನ್ನನ್ನು ಈ ಹಂತಕ್ಕೆ ಬಂದು ತಲುಪುವಂತೆ ಮಾಡಿದೆ ಎಂದಿದ್ದಾರೆ.
ಬಲೂಚಿಸ್ತಾನದ ಮೊದಲ ಹಿಂದೂ ಮಹಿಳಾ ಸಹಾಯಕ ಆಯುಕ್ತರಾಗಿ ಕಾಶಿಶ್ ಚೌಧರಿ ನೇಮಕಗೊಂಡಿದ್ದು, ಈ ಬಗ್ಗೆ ಅವರ ತಂದೆ ಗಿರ್ಧಾರಿ ಲಾಲ್ ಖುಷಿ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ನಿಜಕ್ಕೂ ಖುಷಿ ತಂದು ಕೊಟ್ಟಿದೆ. ಮಗಳು ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಈ ಹಂತಕ್ಕೆ ಬೆಳೆಯಲು ಆಕೆಯ ನಿರಂತರ ಶ್ರಮವೇ ಕಾರಣ ಎಂದಿದ್ದಾರೆ.