ಇತ್ತೀಚಿನ ಸುದ್ದಿ
Trending

ಗ್ಯಾರಂಟಿ ಜತೆ ಬೆಲೆ ಏರಿಕೆ ಶಾಕ್! ಹಾಲು, ವಿದ್ಯುತ್, ಮೆಟ್ರೋ, ಬಸ್

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳ ಜೊತೆಗೆ ಇದೀಗ ಬೆಲೆ‌ ಏರಿಕೆ ಚರ್ಚೆಗೆ ಗ್ರಾಸವಾಗುತ್ತಿದೆ. ಬಡ ಜನರಿಗೆ ಅನುಕೂಲ ಆಗಬೇಕು ಎಂಬ ನಿಟ್ಟಿನಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜಾರಿಗೆ ತಂದಿತ್ತು. ಒಂದು ಕಡೆಯಲ್ಲಿ ಗ್ಯಾರಂಟಿ ಮೂಲಕ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದರೆ ಮತ್ತೊಂದು ಕಡೆ ಬೆಲೆ ಏರಿಕೆ ಮೂಲಕ ಜನರ‌ ಜೋಬನ್ನು ಸರ್ಕಾರ ಬರಿದು ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬಸ್ ದರ, ವಿದ್ಯುತ್ ದರ, ಮೆಟ್ರೋ ದರ ಹಾಗೂ ಹಾಲಿನ‌ ದರ ಏರಿಕೆಯ ಶಾಕ್ ನೀಡಿದ್ದು, ಸರ್ಕಾರದ ಈ ನಿರ್ಧಾರ ಜನಾಕ್ರೋಶಕ್ಕೂ ಕಾರಣವಾಗ್ತಿದೆ.

ಹಾಲಿನ ದರವನ್ನು ಮೂರು ಬಾರಿ ಏರಿಕೆ ಮಾಡಲಾಗಿದೆ. 2023 ಆಗಸ್ಟ್ ₹3, 2024 ಜೂನ್ ₹2 ಹಾಗೂ 2025 ಮಾರ್ಚ್ ಏರಿಕೆ ಮಾಡಲಾಗಿದೆ. ಈಗ ₹4 ಮತ್ತೆ ಏರಿಕೆ ಆಗಿದೆ. ಈ ಮೂಲಕ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ ಮೇಲೆ ಬರೆ ಎಳೆದಿದೆ‌.

ಗೃಹ ಜ್ಯೋತಿ ಯೋಜನೆ ಮೂಲಕ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗ್ತಿದೆ. ಆದರೆ, ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ ₹36 ಪೈಸೆ ಏರಿಕೆ ಮಾಡಲಾಗಿದೆ. ಸರ್ಕಾರದ ಈ ನಡೆಯೂ ಆಕ್ರೋಶಕ್ಕೆ ಕಾರಣವಾಗಿದೆ.

ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಬಸ್ ದರ ಏರಿಕೆ ಮೂಲಕ ಸರ್ಕಾರ ಶಾಕ್ ನೀಡಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ಮೂಡ್‌ನಲ್ಲಿದ್ದ ರಾಜ್ಯದ ಜನರಿಗೆ ಬಸ್ ದರ ಏರಿಕೆಯ ಆಘಾತ ನೀಡಿತ್ತು. ಕರ್ನಾಟಕದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಏರಿಕೆ ಮಾಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನ ಮಾಡಿತ್ತು. ಟಿಕೆಟ್‌ ದರ ಏರಿಕೆ ಮಾಡುವಂತೆ ಸಾರಿಗೆ ನಿಗಮಗಳು ಇಟ್ಟಿದ್ದ ಬೇಡಿಕೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದಕ್ಕೆ ಸಾರಿಗೆ ಇಲಾಖೆ ತನ್ನದೇ ಆದ ಸಮರ್ಥನೆ ನೀಡುತ್ತಾ ಬರುತ್ತಿದೆ.

ಬಸ್ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಜೀವನಾಡಿ ಆಗಿರುವ ಮೆಟ್ರೋ ದರ ಏರಿಕೆ ಮಾಡಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಂಚ ಪರಿಷ್ಕರಣೆ ಮಾಡಲಾಗಿತ್ತು.ಮೆಟ್ರೋ ರೈಲು ಪ್ರಯಾಣ ದರವನ್ನು ಶೇ. 100ರಷ್ಟು ಹೆಚ್ಚಳ ಮಾಡಿ ರಾಜಕೀಯ ಪಕ್ಷಗಳು ಹಾಗೂ ಪ್ರಯಾಣಿಕರಿಂದ ಕೆಂಗಣ್ಣಿಗೆ ಗುರಿಯಾಗಿತ್ತು. ನಂತರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗರಿಷ್ಠ ಶೇ. 71 ರಷ್ಟು ಏರಿಕೆಗೆ ನಿರ್ಧರಿಸಿತ್ತು. ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವುದಾಗಿ ಘೋಷಿಸಿತ್ತು. ವಿಭಿನ್ನ ಸ್ಲ್ಯಾಬ್‌ಗಳ ಅಡಿಯಲ್ಲಿ ಸ್ಟೇಜ್ ಆಧಾರದಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸಲಾಗಿತ್ತು. ಆದರೂ‌ ಇದರಿಂದ ಪ್ರಯಾಣಿಕರಿಗೆ ಹೆಚ್ಚೇನು ಅನುಕೂಲ ಆಗಿಲ್ಲ.

ಇವೆಲ್ಲದರ ನಡುವೆ ನೀರಿನ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. 2014 ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲಾಗಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ 7-8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ಕೇವಲ ಒಂದು ಪೈಸೆ ಹೆಚ್ಚಳವನ್ನು ಪರಿಗಣಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು. ನೀರಿನ ದರ ಹೆಚ್ಚಳದ ಬಗ್ಗೆ ಶೀಘ್ರದಲ್ಲೇ ಬೆಂಗಳೂರಿನ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು.

ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದು, ಲಾಭ ಕೆಎಂಎಫ್ ಗೆ. ಕಂಪನಿ ಆಡಳಿತ ನಡೆಸುತ್ತಿದೆ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಈ ಸರ್ಕಾರ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಹಾಲಿನ ದರ ಏರಿಸುವ ವಿಷಯ ಕ್ಯಾಬಿನೆಟ್ ಮುಂದಿದೆ. ಹಾಲಿನ ದರ ಸಬ್ಸಿಡಿ ರೈತರಿಗೆ ಕೊಡಿ; ಆದರೆ ಜನರ ಮೇಲೆ ಯಾಕೆ ಹೊರೆ ಹಾಕುತ್ತೀರಿ? ನಿಮಗೆ ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ವಾಗ್ದಾಳಿ ನಡೆಸಿದ್ದಾರೆ. ಗ್ಯಾರಂಟಿಗಳನ್ನು ಘೋಷಿಸಿದ್ದೀರಿ; ಎಲ್ಲದರ ಬೆಲೆಗಳನ್ನೂ ಹೆಚ್ಚಿಸಿದ್ದೀರಿ ಎಂದು ಕಿಡಿಕಾರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button