
ಬೆಂಗಳೂರು: ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi), ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಇದಕ್ಕಾಗಿ ಶ್ರಮಿಸುತ್ತಿದ್ದೇನೆ ಮತ್ತು ಅದು ಫಲ ನೀಡಿದೆ ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಹೇಳಿದ್ದಾರೆ. ಅವರ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಗೆಲುವಿಗೆ ಬೇಕಾಗಿದ್ದ 210 ರನ್‌ಗಳ ಗುರಿಯನ್ನು ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ತಲುಪಿತು.
ಸೂರ್ಯವಂಶಿ 35 ಎಸೆತಗಳಲ್ಲಿ 11 ಸಿಕ್ಸರ್ ಮತ್ತು ಏಳು ಬೌಂಡರಿಗಳನ್ನು ಒಳಗೊಂಡಂತೆ ತಮ್ಮ ಶತಕವನ್ನು ಪೂರೈಸಿದರು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಎರಡನೇ ವೇಗದ ಶತಕವಾಗಿದೆ. ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು 37 ಎಸೆತಗಳಲ್ಲಿ 101 ರನ್ ಗಳಿಸಿ ಔಟಾದರು. ಐಪಿಎಲ್‌ನಲ್ಲಿ ಅತ್ಯಂತ ವೇಗದ ಶತಕದ ದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹೆಸರಿನಲ್ಲಿದೆ, ಅವರು ಏಪ್ರಿಲ್ 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 30 ಎಸೆತಗಳಲ್ಲಿ ಶತಕ ಗಳಿಸಿದರು.
ಗೆಲುವಿನ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವೈಭವ್ ಸೂರ್ಯವಂಶಿ, ‘‘ಇದು ಅದ್ಭುತವೆನಿಸುತ್ತದೆ. ಐಪಿಎಲ್‌ನ ಮೂರು ಇನ್ನಿಂಗ್ಸ್‌ಗಳಲ್ಲಿ ಇದು ನನ್ನ ಮೊದಲ ಶತಕ. ಕಳೆದ ಮೂರು-ನಾಲ್ಕು ತಿಂಗಳುಗಳಿಂದ ನಾನು ಇದಕ್ಕಾಗಿ ಶ್ರಮಿಸುತ್ತಿದ್ದೆ ಮತ್ತು ಅದರ ಫಲಿತಾಂಶಗಳು ನನಗೆ ಸಿಕ್ಕಿವೆ. ನಾನು ಮೈದಾನದತ್ತ ಹೆಚ್ಚು ನೋಡುವುದಿಲ್ಲ, ನಾನು ಚೆಂಡಿನ ಮೇಲೆ ಮಾತ್ರ ಗಮನ ಹರಿಸುತ್ತೇನೆ’’ ಎಂದು ಹೇಳಿದ್ದಾರೆ.ಯಶಸ್ವಿ ಜೈಸ್ವಾಲ್ ಅವರೊಂದಿಗಿನ ಶತಕದ ಜೊತೆಯಾಟದ ಬಗ್ಗೆ ಮಾತನಾಡಿದ ಅವರು, ‘‘ಅವರೊಂದಿಗೆ ಬ್ಯಾಟಿಂಗ್ ಮಾಡುವುದು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಏಕೆಂದರೆ ಅವರು ತುಂಬಾ ಸಕಾರಾತ್ಮಕ ವಿಷಯಗಳನ್ನು ಹೇಳುತ್ತಾರೆ ಮತ್ತು ನನಗೆ ಸಲಹೆಯನ್ನೂ ನೀಡುತ್ತಾರೆ. ಇದು ಬ್ಯಾಟಿಂಗ್ ಅನ್ನು ಸುಲಭಗೊಳಿಸುತ್ತದೆ’’ ಎಂದರು.
ಐಪಿಎಲ್‌ನಲ್ಲಿ ಶತಕ ಗಳಿಸುವುದು ಕನಸಿನಂತೆ ಎಂದು ಸೂರ್ಯವಂಶಿ ಹೇಳಿದರು. ಬೌಲರ್‌ಗಳು ಈಗ ನಿಮ್ಮನ್ನು ಗುರಿಯಾಗಿಸಿಕೊಳ್ಳುತ್ತಾರೆ ಎಂಬ ಭಯವಿದೆಯೇ ಎಂದು ಕೇಳಿದಾಗ, ಅವರು, ಇಲ್ಲ, ಯಾವುದೇ ಭಯವಿಲ್ಲ ಎಂದು ಹೇಳಿದರು. ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ನಾನು ಆಟವಾಡುವುದರ ಮೇಲೆ ಮಾತ್ರ ಗಮನ ಹರಿಸುತ್ತೇನೆ ಎಂದಿದ್ದಾರೆ. ಸದ್ಯ ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಆಡಿದ 10ನೇ ಪಂದ್ಯದಲ್ಲಿ ಇದು ಮೂರನೇ ಗೆಲುವು. ಅವರ ಬಳಿ ಈಗ 6 ಅಂಕಗಳಿವೆಯಷ್ಟೆ.