ವಿದೇಶ
Trending

ಪಹಲ್ಗಾಮ್‌ ದಾಳಿಯಲ್ಲಿ ಪಾಕ್‌ ಕೈವಾಡ ತಳ್ಳಿಹಾಕುವಂತಿಲ್ಲ

ವಾಷಿಂಗ್ಟನ್‌ ಡಿಸಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ, ನೆರೆ ರಾಷ್ಟ್ರ ಪಾಕಿಸ್ತಾನದ ಕೈವಾಡದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಗಂಭೀರ ಆರೋಪ ಮಾಡಿದ್ದಾರೆ.ಫಾಕ್ಸ್‌ ನ್ಯೂಸ್‌ನೊಂದಿಗೆ ಮಾತನಾಡಿರುವ ಜೆಡಿ ವ್ಯಾನ್ಸ್‌, “ಪಹಲ್ಗಾಮ್‌ ದಾಳಿಯಲ್ಲಿ ಒಂದು ಹಂತದವರೆಗೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಸಾಬೀತಾಗಿದೆ. ಪಾಕಿಸ್ತಾನವು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಬೇಟೆಯಾಡಲು‌, ಭಾರತಕ್ಕೆ ನೆರವು ನೀಡಬೇಕು. ಆಗ ಮಾತ್ರ ಅದು ದಾಳಿಯ ಹೊಣೆಯಿಂದ ಮುಕ್ತವಾಗಲು ಸಾಧ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಪಹಲ್ಗಾಮ್‌ ದಾಳಿಯಿಂದ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಉಭಯ ದೇಶಗಳು ಪ್ರಾದೇಶಿಕ ಸಂಘರ್ಷವನ್ನು ತಪ್ಪಿಸುವ ಬಗ್ಗೆ ಗಗಮನಹರಿಸಬೇಕು. ಇದು ದೊಡ್ಡ ಸಂಘರ್ಷಕ್ಕೆ ತಿರುಗದಂತೆ ನೋಡಿಕೊಳ್ಳುವ ಜವಾಬ್ದಾರಿ ಭಾರತ ಮತ್ತು ಪಾಕಿಸ್ತಾನದ ಮೇಲೆ ಇದೆ” ಎಂದು ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರನ್ನು ಮಟ್ಟಹಾಕಲು ಭಾರತಕ್ಕೆ ಸಹಾಯ ಮಾಡಬೇಕು” ಎಂದು ಜೆಡಿ ವ್ಯಾನ್ಸ್‌ ಹೇಳಿದರು.ಪಹಲ್ಗಾಮ್‌ ಭಯೋತ್ಪಾದಕ ದಾಳಿ ನಡೆದಾಗ ಜೆಡಿ ವ್ಯಾನ್ಸ್ ತಮ್ಮ ಕುಟುಂಬದೊಂದಿಗೆ ಭಾರತ ಪ್ರವಾಸದಲ್ಲಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ದಾಳಿ ನಡೆದಾಗ ನಾವು ಭಾರತದಲ್ಲಿದ್ದೇವು. ಆ ದಾಳಿಯ ಭೀಕರತೆ ಮತ್ತು ಭಾರತದಲ್ಲಿ ದಾಳಿಯ ವಿರುದ್ಧ ಭುಗಿಲೆದ್ದ ಆಕ್ರೋಶವನ್ನು ಕಣ್ಣಾರೆ ಕಂಡೆವು. ದಾಳಿಯ ಕುರಿತ ಭಾರತದ ಆಕ್ರೋಶವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು” ಎಂದು ಹೇಳಿದ್ದಾರೆ.

“ಆದರೆ, ಭಾರತವು ಈ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸುವ ರೀತಿಯು ದೊಡ್ಡ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಪಾಕಿಸ್ತಾನವು ಜವಾಬ್ದಾರಿಯನ್ನು ತೆಗೆದುಕೊಂಡು, ತನ್ನ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಬೇಟೆಯಾಡಲು ಮತ್ತು ಅವರನ್ನು ಮಟ್ಟಹಾಕಲು ಭಾರತದೊಂದಿಗೆ ಸಹಕರಿಸಬೇಕೆಂದು ನಾವು ಭಾವಿಸುತ್ತೇವೆ” ಎಂದು ಜೆಡಿ ವ್ಯಾನ್ಸ್‌ ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಬಗ್ಗೆ ಅಮೆರಿಕದ ಕಾಳಜಿಯನ್ನು ತೋರಿಸುತ್ತದೆ. ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಾದೇಶಿಕ ಸಂಘರ್ಷವನ್ನು ತಪ್ಪಿಸುವುದು ಮುಖ್ಯ ಎಂದು ಜೆಡಿ ವ್ಯಾನ್ಸ್‌ ಸಲಹೆ ನೀಡಿದ್ದಾರೆ.”ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಬಾರದು ಎಂಬುದು ನಮ್ಮ ಆಶಯ. ಆದರೆ ಇದೇ ವೇಳೆ ನಾವು ಭಾರತದ ಆಕ್ರೋಶಕ್ಕೆ ಮನ್ನಣೆ ನೀಡುತ್ತೇವೆ. ಹೀಗಾಗಿ ಪಾಕಿಸ್ತಾನವು ಪಹಲ್ಗಾಮ್‌ ದಾಳಿಯ ತನಿಖೆಯ ವಿಚಾರವಾಗಿ ಭಾರತಕ್ಕೆ ನೆರವು ನೀಡುವುದರ ಮೂಲಕ ಸಂಘರ್ಷದ ಸಂಭವನೀಯತೆಯನ್ನು ತಗ್ಗಿಸಬೇಕು” ಎಂದು ಜೆಡಿ ವ್ಯಾನ್ಸ್‌ ಆಗ್ರಹಿಸಿದ್ದಾರೆ.

ಪಹಲ್ಗಾಮ್‌ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಅಮೆರಿಕ ಮತ್ತು ಇತರ ದೇಶಗಳು ದೇಶಗಳು ಶಾಂತಿಯುತ ಪರಿಹಾರವನ್ನು ಬಯಸುತ್ತವೆ ಎಂಬುದು ಸ್ಪಷ್ಟವಾಗಿದೆ. ಭಯೋತ್ಪಾದನೆಯನ್ನು ಮಟ್ಟಹಾಕಲು ಜಾಗತಿಕ ಸಹಕಾರದ ಅಗತ್ಯವಿದೆ.


Related Articles

Leave a Reply

Your email address will not be published. Required fields are marked *

Back to top button