ವಿದೇಶ
Trending

ಇತ್ತ ಭಾರತ, ಅತ್ತ ಬಲೂಚ್ ದಾಳಿಗೆ ಕಂಗೆಟ್ಟ ಪಾಕಿಸ್ತಾನ

ನವದೆಹಲಿ, ಮೇ 9: ಭಾರತೀಯ ಸೇನಾಪಡೆಗಳ ಪ್ರತಿ ದಾಳಿಗೆ ಬೆಚ್ಚಿಬಿದ್ದಿರುವ ಪಾಕಿಸ್ತಾನ (Pakistan) ಆಂತರಿಕ ಬಿಕ್ಕಟ್ಟಿನಿಂದಲೂ ಇಕ್ಕಟ್ಟಿಗೆ ಸಿಲುಕಿದೆ. ಆಪರೇಷನ್ ಸಿಂದೂರ್ ನಂತರ ಭಾರತವು ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದ್ದರೆ, ಪಾಕಿಸ್ತಾನದೊಳಗಿನ ಬಲೂಚಿಸ್ತಾನದಲ್ಲಿರುವ ಬಂಡುಕೋರ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನಿ ಸೇನೆಯ ನೆಲೆಗಳ ಮೇಲೆ ಪ್ರಮುಖ ದಾಳಿ ನಡೆಸಿದೆ. ಅಲ್ಲದೆ, ಆಯಕಟ್ಟಿನ ಮಹತ್ವದ ಗ್ಯಾಸ್ ಪೈಪ್‌ಲೈನ್ ಅನ್ನು ಸಹ ಸ್ಫೋಟಿಸಿದೆ.ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದ ಕೀಚ್, ಮಸ್ತುಂಗ್ ಮತ್ತು ಕಚಿ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಮತ್ತು ಅದರ ಮಿತ್ರಪಕ್ಷಗಳ ಮೇಲೆ ಆರು ಪ್ರತ್ಯೇಕ ದಾಳಿಗಳನ್ನು ನಡೆಸಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ. ಈ ದಾಳಿಗಳಲ್ಲಿ ರಿಮೋಟ್ ಕಂಟ್ರೋಲ್ಡ್ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಜಮ್ರಾನ್ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನಿ ಸೇನಾ ಸೈನಿಕನೊಬ್ಬ ಸಾವನ್ನಪ್ಪಿದ್ದಾನೆ. ಹಲವಾರು ಸೇನಾ ನೆಲೆಗಳ ಮೇಲೆ ನಡೆದ ಸಶಸ್ತ್ರ ದಾಳಿಯಲ್ಲಿ ಪಾಕಿಸ್ತಾನ ಸೇನೆಯು ಜೀವ ಮತ್ತು ಆಸ್ತಿಪಾಸ್ತಿ ನಷ್ಟ ಅನುಭವಿಸಿದೆ ಎಂದು ಬಿಎಲ್​ಎ ಪ್ರತಿಪಾದಿಸಿದೆ.

ಅದಕ್ಕೂ ಮುನ್ನ, ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಟ್ರಕ್ ಮೇಲೆ ಬಿಎಲ್‌ಎ ಬಾಂಬ್ ದಾಳಿ ನಡೆಸಿತ್ತು. ಯುಫೋನ್ ಕಂಪನಿಯ ಮೊಬೈಲ್ ಟವರ್‌ಗೆ ಕೂಡ ಹಾನಿ ಮಾಡಿತ್ತು. ಪಾಕಿಸ್ತಾನಿ ಸೈನ್ಯಕ್ಕೆ ಸಹಾಯ ಮಾಡಬೇಡಿ ಎಂದು ಬಿಎಲ್​ಎ ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ, ಈ ಎಲ್ಲಾ ದಾಳಿಗಳ ಜವಾಬ್ದಾರಿಯನ್ನು ಬಿಎಲ್‌ಎ ವಹಿಸಿಕೊಂಡಿದೆ ಮತ್ತು ಇದನ್ನು ಬಲೂಚ್ ಸ್ವಾತಂತ್ರ್ಯ ಹೋರಾಟದ ಭಾಗವೆಂದು ಕರೆದಿದೆ.ಭಾರತದ ವಿರುದ್ಧದ ವಾಯು ಮತ್ತು ಡ್ರೋನ್ ದಾಳಿಗಳಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಈಗ ತನ್ನದೇ ದೇಶದಲ್ಲಿ ಪ್ರತ್ಯೇಕತಾವಾದಿ ದಾಳಿಗಳನ್ನು ಎದುರಿಸುವಲ್ಲಿಯೂ ವಿಫಲವಾಗಿದೆ. ಮೂಲಗಳ ಪ್ರಕಾರ, ಬಲೂಚಿಸ್ತಾನದ ಹಲವು ಭಾಗಗಳಲ್ಲಿ ಪಾಕಿಸ್ತಾನ ಸೇನೆಯ ಮುಂಚೂಣಿ ಠಾಣೆಗಳನ್ನು ಗುರಿಯಾಗಿಸಿಕೊಂಡು ಬಿಎಲ್‌ಎ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯು ಭಾರೀ ನಷ್ಟ ಅನುಭವಿಸಿದೆ. ಪ್ರಸ್ತುತ ಒಬ್ಬ ಪಾಕಿಸ್ತಾನಿ ಸೈನಿಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಆಪರೇಷನ್ ಸಿಂಧೂರ್‌ನಿಂದಾಗಿ ಪಾಕಿಸ್ತಾನದ ಆಡಳಿತವು ಈಗಾಗಲೇ ಒತ್ತಡದಲ್ಲಿದೆ. ಭಾರತ ನಡೆಸಿದ ಪ್ರತೀಕಾರದ ದಾಳಿಯ ಪರಿಣಾಮ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಉಡಾವಣಾ ತಾಣಗಳು ಭಾರಿ ಹಾನಿಗೊಳಗಾಗಿವೆ. ಈಗ ಬಲೂಚಿಸ್ತಾನದಲ್ಲಿ ನಡೆದ ಬಿಎಲ್‌ಎ ದಾಳಿಯು ಪಾಕಿಸ್ತಾನ ಸರ್ಕಾರದ ಆಂತರಿಕ ದೌರ್ಬಲ್ಯವನ್ನು ಮತ್ತಷ್ಟು ಬಹಿರಂಗಪಡಿಸಿದೆ.ಆಪರೇಷನ್ ಸಿಂಧೂರ್ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವರ್ಚಸ್ಸಿಗೆ ಮತ್ತಷ್ಟು ಹಾನಿಯಾಗಿದೆ. ಈಗ ಆಂತರಿಕ ದಂಗೆಯು ಪಾಕಿಸ್ತಾನವನ್ನು ಮತ್ತಷ್ಟು ಅಸ್ಥಿರಗೊಳಿಸಿದೆ ಎಂದು ತಜ್ಞರು ಭಾವಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button