
ನಿನ್ನೆಯಿಂದ ಹರಿದಾಡುತ್ತಿದ್ದ ಸುದ್ದಿ ಇದೀಗ ನಿಜವಾಗಿದೆ. ಮಿಲಿಯನ್ ಡಾಲರ್ ಟೂರ್ನಿ 2025 ರ ಐಪಿಎಲ್ (IPL 2025) ಅನ್ನು ಒಂದು ವಾರದವರೆಗೆ ಮುಂದೂಡಲಾಗಿದೆ ಎಂದು ಬಿಸಿಸಿಐ (BCCI) ಅಧಿಕೃತ ಮಾಹಿತಿ ನೀಡಿದೆ. ಇದರರ್ಥ ವಾರದ ನಂತರ ಪರಿಸ್ಥಿತಿ ತಿಳಿಕೊಂಡರೆ ಐಪಿಎಲ್ ದ್ವಿತೀಯಾರ್ಧ ವಾರದ ನಂತರ ಆರಂಭವಾಗಲಿದೆ. ಇದು ಭಾರತದಲೇ ಮುಂದುವರೆಯಲಿದೆಯೋ ಅಥವಾ ವಿದೇಶವನ್ನು ಆಯ್ಕೆ ಮಾಡಲಾಗುತ್ತದೋ ಎಂಬುದು ವಾರದ ಬಳಿಕ ತಿಳಿಯಲಿದೆ. 2025 ರ ಐಪಿಎಲ್ ಪಂದ್ಯಾವಳಿಯನ್ನು ಕೇವಲ ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿಯೇ ಮಾಹಿತಿ ನೀಡಿದೆ.
ಮುಂದಿನ ವಾರ ಐಪಿಎಲ್‌ನ ಹೊಸ ವೇಳಾಪಟ್ಟಿ ಬಿಡುಗಡೆಯಾಗಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಐಪಿಎಲ್ ಅನ್ನು ಇನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿಲ್ಲ. ಇದನ್ನು ಕೇವಲ ಒಂದು ವಾರದ ಕಾಲ ಮುಂದೂಡಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಹೊಸ ವೇಳಾಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಿರುವ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ‘ಐಪಿಎಲ್ ಆಡಳಿತ ಮಂಡಳಿಯು ಎಲ್ಲಾ ತಂಡಗಳೊಂದಿಗೆ ಸೂಕ್ತ ಸಮಾಲೋಚನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಫ್ರಾಂಚೈಸಿಗಳು ತಮ್ಮ ಆಟಗಾರರ ಕಾಳಜಿ ಮತ್ತು ಭಾವನೆಗಳನ್ನು ಹಾಗೂ ಪ್ರಸಾರಕರು, ಪ್ರಾಯೋಜಕರು ಮತ್ತು ಅಭಿಮಾನಿಗಳ ಅಭಿಪ್ರಾಯಗಳನ್ನು ಹಂಚಿಕೊಂಡಿವೆ. ನಮ್ಮ ಸಶಸ್ತ್ರ ಪಡೆಗಳ ಬಲ ಮತ್ತು ಸನ್ನದ್ಧತೆಯ ಬಗ್ಗೆ ಬಿಸಿಸಿಐಗೆ ಸಂಪೂರ್ಣ ನಂಬಿಕೆ ಇದೆ, ಆದರೆ ಎಲ್ಲಾ ಪಾಲುದಾರರ ಸಾಮೂಹಿಕ ಹಿತಾಸಕ್ತಿಯಿಂದ ಈ ನಿರ್ಧಾರ ತೆಗೆದುಕೊಳ್ಳುವುದು ಸರಿ ಎಂದು ಮಂಡಳಿ ಭಾವಿಸಿದೆ ಎಂದು ಐಪಿಎಲ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.