
ಹುಬ್ಬಳ್ಳಿ, ಮೇ 06: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಕಿರೇಸೂರು ಕ್ರಾಸ್ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಶ್ವೇತಾ(29), ಅಂಜಲಿ (26), ಸಂದೀಪ್ (26), ವಿಠ್ಠಲ್ (55) ಮತ್ತು ಶಶಿಕಲಾ (40) ಮೃತರು. ವ್ಯಾಪಾರಕ್ಕೆಂದು ಬಾಗಲಕೋಟೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ಜಕ್ಕನಹಳ್ಳಿ ಕ್ರಾಸ್ ಬಳಿ ನಡೆದಿದೆ. ನೆಲಮಂಗಲ ನಿವಾಸಿ ಅನ್ಸರ್ ಪಾಷ (43) ಮೃತ ಸವಾರ.ಹಲಸಿನ ಹಣ್ಣು ತರುವಾಗ ಅಪಘಾತ ಸಂಭವಿಸಿದೆ. ಸದ್ಯ ಪೊಲೀಸರು ಟ್ರಾಕ್ಟರ್ ವಶಕ್ಕೆ ಪಡೆದುಕೊಂಡಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿ ಕಾರು ಟ್ರಾನ್ಸ್ ಫಾರ್ಮ್ಗೆ ಕಾರು ಡಿಕ್ಕಿ ಹೊಡೆದಿರುವಂತಹ ಘಟನೆ ನಿನ್ನೆ ಬೆಳಗ್ಗೆ 08.30ಕ್ಕೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಗೊಂಡ ಕಾರು ಚಾಲಕನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ ಹೊಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 15 ಜನರಿಗೆ ಗಾಯಗಳಾಗಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ನಡೆದಿದೆ. ಸದ್ಯ ಗಾಯಾಳುಗಳನ್ನು ಚಳ್ಳಕೆರೆ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಿಂದ ಬೆಂಗಳೂರಿಗೆ ಸಾರಿಗೆ ಬಸ್ ತೆರಳುತ್ತಿದ್ದ ವೇಳೆ ಸಾಣಿಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ಅಪಘಾತ ನಡೆದಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.