
ಬೆಂಗಳೂರು (ಮೇ. 02): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ (Pahalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ದಿ ಕಲಿಸುತ್ತಿದೆ ಎಂಬಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ಪಾಕಿಸ್ತಾನ ವಾಯುಪಡೆಯ ಎಫ್ -16 ಜೆಟ್ ಅನ್ನು ಭಾರತದ ರಫೇಲ್ ಜೆಟ್ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹೊಡೆದುರುಳಿಸಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.ಭಾರತದ ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ಭಾರತೀಯ ವಾಯುಪಡೆಯು ಸಿಯಾಲ್‌ಕೋಟ್‌ನಲ್ಲಿ ಪಾಕಿಸ್ತಾನದ ಎಫ್ -16 ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ಹೇಳುತ್ತಿದ್ದಾರೆ.
ಅತ್ತ ಪಾಕಿಸ್ತಾನದಲ್ಲಿ paknews.co ನ ಮುಖ್ಯ ಸಂಪಾದಕ ಅಜರ್ ಸಯೀದ್, ‘ಪಾಕಿಸ್ತಾನ ವಾಯುಪಡೆಯ ಎಫ್ 16 ಭಾರತೀಯ ರಫೇಲ್ ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ, ಇದು ಬಲವಾದ ಸಂದೇಶವಾಗಿದೆ’ ಎಂದು ಬರೆದಿದ್ದಾರೆ.
ನಾವು ನಿಜಾಂಶವನ್ನು ತಿಳಿಯಲು ವೈರಲ್ ವಿಡಿಯೋದ ಪ್ರಮುಖ ಚೌಕಟ್ಟುಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಸಂದರ್ಭ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಜೆಟ್ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿಯೊಂದಿಗೆ ಜೂನ್ 11, 2024 ರಂದು ಮೂವಿಟಾಕೀಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಇದೇ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ.
ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ನಾವು ಗೂಗಲ್ನಲ್ಲಿ ಕೆಲವು ಕೀವರ್ಡ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ಜೂನ್ 4, 2024 ರಂದು ಈ ಘಟನೆಯ ಕುರಿತು ಹಾಗೂ ವೈರಲ್ ಆಗುತ್ತಿರುವ ವಿಡಿಯೋದ ಸ್ಕ್ರೀನ್ ಶಾಟ್ನೊಂದಿಗೆ ಅನೇಕ ಮಾಧ್ಯಮ ವರದಿ ಮಾಡಿರುವುದು ನಮಗೆ ಸಿಕ್ಕಿತು. ‘‘ಭಾರತೀಯ ವಾಯುಪಡೆಯ ಸುಖೋಯ್ ಸು -30 ಎಂಕೆಐ ಫೈಟರ್ ಜೆಟ್ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಶಾದ್ ತಾಲ್ಲೂಕಿನ ಶಿರಸ್ಗಾಂವ್‌ನಲ್ಲಿ ಪತನಗೊಂಡಿದೆ. ಈ ಜೆಟ್ ಅನ್ನು ಕೂಲಂಕುಷ ಪರೀಕ್ಷೆ ಮತ್ತು ತರಬೇತಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಗೆ ಕಳುಹಿಸಲಾಗಿದೆ. ಅಲ್ಲಿಂದ ವಿಮಾನ ಹಾರಾಟ ಆರಂಭವಾಯಿತು. ಅಂದರೆ ಅದು ತರಬೇತಿ ಹಾರಾಟಕ್ಕಾಗಿ ಗಾಳಿಯಲ್ಲಿತ್ತು. ಅಪಘಾತ ಸಂಭವಿಸುವ ಮೊದಲು ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಜಿಗಿದಿದ್ದರು. ವಿಮಾನವು ಹೊಲವೊಂದರಲ್ಲಿ ಪತನಗೊಂಡಿದೆ. ವಾಯುಪಡೆಯು ನ್ಯಾಯಾಲಯದ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.’’ ಎಂಬ ಮಾಹಿತಿ ಇದರಲ್ಲಿದೆ.ಹೀಗಾಗಿ ಪಾಕಿಸ್ತಾನ ವಾಯುಪಡೆಯ ಎಫ್ -16 ಜೆಟ್ ಅನ್ನು ಭಾರತದ ರಫೇಲ್ ಜೆಟ್ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹೊಡೆದುರುಳಿಸಿದ ವಿಡಿಯೋ ಇದಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಟಿವಿ9 ಕನ್ನಡ ಸತ್ಯ ಪರಿಶೀಲನೆಯು ಸ್ಪಷ್ಟವಾಗಿ ಹೇಳುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಎರಡೂ ದೇಶಗಳ ನಡುವೆ ವಿಭಿನ್ನ ರೀತಿಯ ಯುದ್ಧ ನಡೆಯುತ್ತಿದ್ದು, ಇದು ಎರಡೂ ದೇಶಗಳ ಮನರಂಜನಾ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಕಾಣಿಸುತ್ತಿಲ್ಲ. ಭಾರತವು ಮಹಿರಾ ಖಾನ್, ಸಜಲ್ ಅಲಿಯಿಂದ ಹಿಡಿದು ಹನಿಯಾ ಆಮಿರ್ ವರೆಗಿನ ಅನೇಕ ತಾರೆಯರ ಖಾತೆಗಳನ್ನು ನಿಷೇಧಿಸಿದೆ.ಹಾಗೆಯೇ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ಗಳನ್ನು ಕೂಡ ಭಾರತದಲ್ಲಿ ನಿಷೇಧಿಸಲಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ಕೂಡ ಭಾರತೀಯ ಹಾಡುಗಳ ಪ್ರಸಾರವನ್ನು ನಿಷೇಧಿಸಿದೆ. ಪಾಕಿಸ್ತಾನಿ ಪ್ರಸಾರಕರ ಸಂಘ ಅಂದರೆ ಪಿಬಿಎ ಪಾಕಿಸ್ತಾನಿ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ.