
ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದಂತಹ ಮಳೆ (Rain) ಮೇ ತಿಂಗಳಲ್ಲೇ ಬಂದುಬಿಟ್ಟಿದೆ. ಇದು ಶತಮಾನದ ಮಳೆ ಅಂತಾ ಹೇಳಲಾಗುತ್ತಿದ್ದು, 60ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಅಕ್ಷರಶಃ ಮರಣ ಮೃದಂಗ ಬಾರಿಸುತ್ತಿದೆ. ಅಷ್ಟೇ ಅಲ್ಲ, ಮತ್ತೆ ಭೂಮಿ ಕುಸಿಯುವ ಭೀತಿ ಶುರುವಾಗಿದೆ. ಗುಡ್ಡಕುಸಿತ ಆಗಬಹುದಾದ ಸ್ಥಳದಲ್ಲಿ ಇರೋರು ಎಚ್ಚರಿಕೆಯಿಂದಿರಿ ಅಂತಾ ಹವಾಮಾನ ಇಲಾಖೆ (Meteorological Department) ಸೂಚಿಸಿದೆ.ಮಹಾಮಳೆಗೆ ದಕ್ಷಿಣ ಕನ್ನಡ ಅಕ್ಷರಶಃ ತತ್ತರಿಸಿದೆ. ಭೂಕುಸಿತ, ಗೋಡೆ ಕುಸಿತ, ಮಳೆ ಪ್ರವಾಹ ಹೀಗೆ ಒಂದರ ಹಿಂದೊಂದು ಹೊಡೆತ ದಕ್ಷಿಣ ಕನ್ನಡಕ್ಕೆ ಬೀಳುತ್ತಲೇ ಇದೆ. ಭೂಮಿ ಕುಸಿದು ನಾಲ್ವರ ಸಾವು ಬೆನ್ನಲ್ಲೇ ಈಗ ಮತ್ತೆ ಆತಂಕ ಶುರುವಾಗಿದೆ. ಇಂದು ಕೂಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಅಂಗನವಾಡಿಗಳು, ಶಾಲೆಗಳು, ಪಿಯು ಕಾಲೇಜುಗಳಿಗೂ ಇವತ್ತು ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಳೆ ಶತಮಾನದ ಮಳೆಯಂತೆ. ಇದನ್ನ ಖುದ್ದು ರಾಜ್ಯ ಸರ್ಕಾರದ ಅಧಿಕಾರಿಗಳೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಹೇಳಿದ್ದಾರೆ. 125 ವರ್ಷಗಳಲ್ಲಿ ಮೇ ತಿಂಗಳಲ್ಲಿ ಇಷ್ಟೊಂದು ಮಳೆ ಬಿದ್ದಿದೆ ಅಂತಾ ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಏಪ್ರಿಲ್‌ನಿಂದ ಈವರೆಗೆ ರಾಜ್ಯದಲ್ಲಿ ಮಳೆ ಅನಾಹುತಗಳಿಗೆ ಬರೋಬ್ಬರಿ 67 ಜನರು ಮೃತಪಟ್ಟಿದ್ದಾರೆ ಅನ್ನೋ ಮಾಹಿತಿಯನ್ನ ಕಂದಾಯ ಇಲಾಖೆ ನೀಡಿದೆ.ಮಾರ್ಚ್ ನಿಂದ ಮೇ ವರೆಗೆ ಸಾಮಾನ್ಯವಾಗಿ ಪೂರ್ವ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ವರ್ಷ ಮುಂಗಾರು ಮಳೆ ರಾಜ್ಯಕ್ಕೆ ಸುಮಾರು 10 ದಿನಗಳ ಮುಂಚಿತವಾಗಿ ಪ್ರವೇಶಿಸಿದೆ. ಇದರ ಪರಿಣಾಮವಾಗಿ, ಮೈಸೂರು, ಕೊಡಗು, ಮಂಡ್ಯ ಮತ್ತು ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದೆ.
ಇನ್ನು ಭಾರತೀಯ ಹವಾಮಾನ ಇಲಾಖೆ ಪ್ರಕಾರ ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಸಿಡಿಲು ಗುಡುಗಿನೊಂದಿಗೆ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಉತ್ತರ ಕನ್ನಡದಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ.ಬೆಂಗಳೂರಿನಲ್ಲಿ ಇಂದು ದಿನವಿಡೀ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣಾ ಮಳೆಯಾಗುವ ನಿರೀಕ್ಷೆಯಿದೆ. ಕನಿಷ್ಠ ತಾಪಮಾನ 21.0 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನ 27.0 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಂದಾದ ಅನಾಹುತದಿಂದ ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಗುಡ್ಡದ ಸಮೇತ ಮರಗಳು ಬಿದ್ದು ಮನೆಯಲ್ಲಿದ್ದ ಮೂವರು ಅಸುನೀಗಿದ್ದಾರೆ. ದೇರಳಕಟ್ಟೆ ಬಳಿಯ ಮಂಟೆಪದವು ಎಂಬಲ್ಲಿ ನೌಶಾದ್ ಅನ್ನೋರ ಮನೆಯ ಮೇಲೆ ಗುಡ್ಡ ಕುಸಿದಿದ್ದು, 10 ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
 
				

