
ದೊಡ್ಡ ಬಜೆಟ್, ಸ್ಟಾರ್ ಹೀರೋ, ಖ್ಯಾತ ನಿರ್ದೇಶಕರು ಇದ್ದರೆ ಸಿನಿಮಾ ಸೂಪರ್ ಹಿಟ್ ಆಗೋದು ಪಕ್ಕಾ. ಅದೇ ರೀತಿ ಸಣ್ಣ ಬಜೆಟ್, ಸುಂದರ ಕಥೆ ಮೂಲಕ ಭಿನ್ನ ಪ್ರಯೋಗ ಮಾಡಿದರೂ ಜನರು ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ. ಕೇವಲ 7 ಕೋಟಿ ರೂಪಾಯಿನಲ್ಲಿ ಸಿದ್ಧವಾದ ಈ ಚಿತ್ರ ಥಿಯೇಟರ್ನಲ್ಲಿ 86 ಕೋಟಿ ರೂಪಾಯಿ ಗಳಿಕೆ ಮಾಡಿತು. ಈಗ ಈ ಚಿತ್ರ ಜಿಯೋಹಾಟ್ಸ್ಟಾರ್ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಿದೆ. ಅದುವೇ ‘ಟೂರಿಸ್ಟ್ ಫ್ಯಾಮಿಲಿ’ (Tourist Family).ಜೂನ್ 2ರಂದು ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಆರಂಭಿಸಿದೆ. ಮೂಲ ತಮಿಳಾದರೂ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ತಮಿಳಿನ ಎಂ. ಶಶಿಕುಮಾರ್, ಸಿಮ್ರನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಭಿಷನ್ ಜೀವಿಂತ್ ಅವರು ಕಥೆ ಬರೆದು ಸಿನಿಮಾ ಮಾಡಿದ್ದಾರೆ.
ದಾಸ್ (ಶಶಿಕುಮಾರ್), ವಾಸಂತಿ (ಸಿಮ್ರನ್) ಹಾಗೂ ಅವರ ಕುಟುಂಬ ಶ್ರೀಲಂಕಾ ತಮಿಳರು. ಅಲ್ಲಿ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿ ಕಾರಣಕ್ಕೆ ಅವರು ದೋಣಿ ಹತ್ತಿ ಭಾರತಕ್ಕೆ ವಲಸೆ ಬರುತ್ತಾರೆ. ಅಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ಇವರು ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ, ಆ ಬಳಿಕ ಹೇಗೆ ಭಾರತದಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಅನ್ನೋದು ಸಿನಿಮಾ ಕಥಾವಸ್ತು.
ಒಳ್ಳೆತನಕ್ಕೆ ಎಂದಿಗೂ ಗೆಲುವು ಅನ್ನೋದು ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದ ಥೀಮ್. ಕಥಾ ನಾಯಕನ ಒಳ್ಳೆತನವೇ ಆತನನ್ನು ಹಾಗೂ ಆತನ ಕುಟುಂಬವನ್ನು ಕಾಪಾಡುತ್ತದೆ. ಸಿನಿಮಾದುದ್ದಕ್ಕೂ ಭಿನ್ನ ರೀತಿಯ ಭಾವನೆಗಳನ್ನು ತೋರಿಸಲಾಗಿದೆ. ಎಂಥ ಗಟ್ಟಿ ಮನಸ್ಸಿನವರಾದರೂ ಈ ಚಿತ್ರ ನೋಡಿದ ಬಳಿಕ ಅದು ಕರಗಲೇಬೇಕು. ಸಿನಿಮಾದಲ್ಲಿ ನಟಿಸಿದ ಪ್ರತಿ ಕಲಾವಿದರದ್ದೂ ಅದ್ಭುತ ನಟನೆ. ಅದೇ ರೀತಿ ಹಾಸ್ಯವನ್ನು ಚೆನ್ನಾಗಿ ಬಳಸಲಾಗಿದೆ. ಯೋಗಿ ಬಾಬು ಕೂಡ ಚಿತ್ರದ ಹೈಲೈಟ್. ಈ ಸಿನಿಮಾದ ಅವಧಿ ಎರಡು ಗಂಟೆ ಇದ್ದು, ವೀಕೆಂಡ್ನಲ್ಲಿ ಒಂದೊಳ್ಳೆಯ ಚಿತ್ರ ವೀಕ್ಷಿಸಬೇಕು ಎಂದುಕೊಂಡವರಿಗೆ ಒಳ್ಳೆಯ ಆಯ್ಕೆ.