ಇತ್ತೀಚಿನ ಸುದ್ದಿ
Trending

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ, ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್

ಪೂರ್ವ ಇಂಡೋನೇಷ್ಯಾ(Indonesia)ದಲ್ಲಿ ಮೌಂಟ್ ಲೆವೊಟೊಬಿ ಲಕಿ-ಲಕಿ ಜ್ವಾಲಾಮುಖಿ(Volcano) ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿವೆ. ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ಮರಳಿದೆ. ಈ ಸ್ಫೋಟದಿಂದಾಗಿ, ಏರ್ ಇಂಡಿಯಾ, ಸಿಂಗಾಪುರ್ ಏರ್ಲೈನ್ಸ್, ಏರ್ ನ್ಯೂಜಿಲೆಂಡ್, ಜೆಟ್‌ಸ್ಟಾರ್, ವರ್ಜಿನ್ ಆಸ್ಟ್ರೇಲಿಯಾ ಮತ್ತು ಚೀನಾದ ಜುನ್ಯಾವೊ ಏರ್‌ಲೈನ್ಸ್ ಸೇರಿದಂತೆ ಬಾಲಿಗೆ ಅನೇಕ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು 10 ಕಿ.ಮೀ ಎತ್ತರವನ್ನು ತಲುಪಿದ್ದು, ಇದು ವಾಯು ಸಂಚಾರದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಏರ್ ಇಂಡಿಯಾ ವಿಮಾನ(AI2145 ) ಇಂದು ಬೆಳಗ್ಗೆ ದೆಹಲಿಯಿಂದ ಬಾಲಿಗೆ ಹೊರಟಿತ್ತು. ಆದರೆ ಜ್ವಾಲಾಮುಖಿಯಿಂದಾಗಿ ದೆಹಲಿಗೆ ವಾಪಸ್ ಹೋಗುವಂತೆ ಸೂಚನೆ ನೀಡಲಾಯಿತು.ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಏರ್ ಇಂಡಿಯಾ ಪ್ರಯಾಣಿಕರಿಗೆ ಹೋಟೆಲ್ ವಸತಿ ಸೌಲಭ್ಯವನ್ನು ಒದಗಿಸಿದೆ ಜೊತೆಗೆ ಎರಡು ಆಯ್ಕೆಗಳನ್ನು ನೀಡಿದೆ.

ಒಂದೊಮ್ಮೆ ಪ್ರಯಾಣಿಕರ ಟಿಕೆಟ್​ನ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಅಥವಾ ಸ್ವಲ್ಪ ಸಮಯದ ಬಳಿಕ ಬೇರೆ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಹೇಳಿದೆ.ಮೌಂಟ್ ಲೆವೊಟೊಬಿ ಲಕಿ-ಲಕಿ ಪೂರ್ವ ನುಸಾ ತೆಂಗಾರ ಪ್ರಾಂತ್ಯದ ಫ್ಲೋರ್ಸ್ ದ್ವೀಪದಲ್ಲಿ 1,584 ಮೀಟರ್ ಎತ್ತರದ ಅವಳಿ ಶಿಖರಗಳ ಜ್ವಾಲಾಮುಖಿ ಸ್ಫೋಟಗೊಂಡಿದೆ.ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ನವೆಂಬರ್‌ನಲ್ಲಿ ಮೌಂಟ್ ಲೆವೊಟೊಬಿ ಲಕಿ ಲಕಿ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರು ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button