
ಮಾದಕ ದ್ರವ್ಯ ಸಾಗಾಟ ಆರೋಪದಲ್ಲಿ ಮುಂಬೈ ಪೊಲೀಸರಿಂದ ಬಂಧಿತನಾಗಿರುವ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೋರ್ವನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಲಿಂಗರಾಜ್ ಕಣ್ಣಿ ಉಚ್ಚಾಟನೆಯಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.
ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಲಿಂಗರಾಜ್ ಕಣ್ಣಿಯನ್ನು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಆದೇಶ ಹೊರಡಿಸಿದ್ದಾರೆ.ನಿಷೇಧಿತ 120ಕ್ಕೂ ಹೆಚ್ಚು ಎನ್ರೆಕ್ಸ್ ಬಾಟಲ್ಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ತೌಸಿಫ್ ಆಸಿಫ್ ತುರವೇ (A1) ಕಲಬುರಗಿಯ ಲಿಂಗರಾಜ ಕಣ್ಣಿ (A2) ಹಾಗೂ ಸಯ್ಯದ್ ಇರ್ಫಾನ್ (A3) ಬಂಧಿತರಾಗಿದ್ದು, ಮಹಾರಾಷ್ಟ್ರದ ಥಾಣೆಯಲ್ಲಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಮುಂಬೈನ ಬಜಾರ್ಪೇಠ್ ಪೊಲೀಸ್ ಮೂಲಗಳು ತಿಳಿಸಿವೆ.
”ಡೈಲಾಗ್ ಮಿನಿಸ್ಟರ್ ಅಕ್ಕ ಪಕ್ಕ ಇರೋದು ಅಕ್ಕಿ ಕಳ್ಳರು, ಚೆಕ್ ಕಳ್ಳರು, ಸುಪಾರಿ ಸೇನೆ, ಸ್ಯಾಂಡ್ ಕಳ್ಳರು ಇಷ್ಟೇ ಇದ್ದಾರೆ ಅಂತ ಅಂದುಕೊಂಡಿದ್ದೆ. ಆದರೆ, ಡೈಲಾಗ್ ಮಿನಿಸ್ಟರ್ ಅಕ್ಕ ಪಕ್ಕ ಇಂತಹ ಡ್ರಗ್ಸ್ ಪೆಡ್ಲರ್ ಕೂಡಾ ಇದ್ದಾರೆ ಅನ್ನೋದು ಈಗ ಗೊತ್ತಾಯ್ತು. ಇಂತಹ ದೇಶದ್ರೋಹಿಯನ್ನು ಪಕ್ಕಕ್ಕೆ ಇಟ್ಟುಕೊಂಡು ರಾಜಕೀಯ ಮಾಡ್ತಿರಲ್ಲ, ನಿಮಗೆ ನಾಚಿಕೆ ಆಗಲ್ವಾ?” ಅಂತ ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
”ಸುಮಾರು 27 ಸಾವಿರ ರೂಪಾಯಿ ಮೌಲ್ಯದ ಕಾಫ್ ಸಿರಪ್ ದೊರಕಿದ ಹಿನ್ನೆಲೆಯಲ್ಲಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸರು ಸ್ವತಂತ್ರರಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
”ಕಾಂಗ್ರೆಸ್ ಪಕ್ಷವಾಗಲಿ, ಸರ್ಕಾರವಾಗಲಿ ಇದನ್ನು ಸಮರ್ಥಿಸುವುದಿಲ್ಲ. ಆದರೆ, 27 ಸಾವಿರ ಮೌಲ್ಯದ ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ BJP Karnataka ದವರು ಅದಕ್ಕಿಂತ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ತಮ್ಮ ಪಕ್ಷದವರ ಬಗ್ಗೆ ಕ್ರಮ ಕೈಗೊಳ್ಳುವ ನೈತಿಕತೆ ತೋರುವುದು ಯಾವಾಗ?. ಪೋಕ್ಸೋ ಪ್ರಕರಣದ ಆರೋಪಿಯನ್ನು ಬಿಜೆಪಿ ಉಚ್ಚಾಟನೆ ಮಾಡುವುದು ಯಾವಾಗ?. ಪುತ್ತೂರಿನಲ್ಲಿ ಬಿಜೆಪಿ ನಾಯಕನ ಪುತ್ರನೊಬ್ಬ ಯುವತಿಯೊಬ್ಬರಿಗೆ ವಂಚಿಸಿ ಅತ್ಯಾಚಾರವೆಸಗಿದ್ದರ ಬಗ್ಗೆ ಕ್ರಮ ಕೈಗೊಳ್ಳುವುದು ಯಾವಾಗ?. ವಿಧಾನಸೌಧದ ಆವರಣದಲ್ಲೇ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ, ಏಡ್ಸ್ ಇಂಜೆಕ್ಷನ್ ನೀಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸುವುದು ಯಾವಾಗ?. ಮಹಿಳಾ ಅಧಿಕಾರಿಗಳನ್ನು ಅವಮಾನಕರವಾಗಿ ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯನ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ?. ಗಣಿ ಹಗರಣದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ಬಿಜೆಪಿ ಉಚ್ಚಾಟನೆ ಮಾಡುವುದು ಯಾವಾಗ?” ಎಂದು ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ.