ಇತ್ತೀಚಿನ ಸುದ್ದಿ
Trending

ಅರಣ್ಯದಲ್ಲಿ ದನಕರು ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ

ರಾಜ್ಯದಲ್ಲಿರುವ ಎಲ್ಲ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿರುವ ಸಚಿವರು, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ.

ದೊಡ್ಡ ಸಂಖ್ಯೆಯ ಸಾಕು ಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.

ಕಾಡಿನಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರಕ್ಕೆ ಅವಕಾಶ ಇಲ್ಲ: ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ, ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮವಹಿಸಲು ಸೂಚಿಸಿದ್ದಾರೆ.

ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದೂ ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಟಿಪ್ಪಣಿಯಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.
ಮಿಗಿಲಾಗಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಅರಣ್ಯದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ವಿರುದ್ಧ ನೀಡಿದ ತೀರ್ಪಿನ ಬಳಿಕ, ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಅರಣ್ಯ ಸಚಿವರು ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button