
ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್ – ಬಾಲ್ಟಿಸ್ತಾನ್ (PoGB) ಪ್ರದೇಶದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೆ ತಲುಪಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅಪಾಯದಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಭಾನುವಾರ ಅಧಿಕಾರಿಗಳನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.
ಈ ಪ್ರದೇಶವು ಹವಾಮಾನ ಬದಲಾವಣೆಯ ಆತಂಕಕಾರಿ ಪರಿಣಾಮಗಳನ್ನು ಎದುರಿಸುತ್ತಿದೆ. ಏರುತ್ತಿರುವ ತಾಪಮಾನ, ಅನಿರೀಕ್ಷಿತ ಹವಾಮಾನ ಮತ್ತು ಹಿಮನದಿ ಕರಗುವಿಕೆ ಹಾಗೂ ಮೇಘ ಸ್ಫೋಟಗಳಿಂದಾಗಿ ತೀವ್ರ ಪ್ರವಾಹ ಉಂಟಾಗಿದೆ. ಕಳೆದ ವಾರ ಪ್ರಾರಂಭವಾದ ಪ್ರವಾಹವು ಭೂಕುಸಿತಗಳಿಗೆ ಕಾರಣವಾಯಿತು. ಅನೇಕರು ಇದರಲ್ಲಿ ಸಿಲುಕಿಕೊಂಡರು ಮತ್ತು ಪ್ರದೇಶದಾದ್ಯಂತ 500 ಕ್ಕೂ ಹೆಚ್ಚು ಮನೆಗಳು, ರಸ್ತೆಗಳು ಮತ್ತು ಅಗತ್ಯ ಮೂಲಸೌಕರ್ಯಗಳು ಹಾನಿಗೊಳಗಾಗಿದೆ ಎಂದು ಡಾನ್ ವರದಿ ಮಾಡಿದೆ.
ಈ ಪ್ರದೇಶದ ಅಧಿಕಾರಿ ನೀಡಿರುವ ಮಾಹಿತಿ ಅನ್ವಯ ಸೋಮವಾರದಿಂದ ಪ್ರವಾಹ ಸಂಬಂಧಿತ ಘಟನೆಗಳಿಂದ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಾಬುಸರ್ ಕಣಿವೆಯಲ್ಲಿ ಮಾತ್ರ ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಡೈಮರ್‌ನ ಥೋರ್ ಕಣಿವೆಯಿಂದ ಎರಡು ಮತ್ತು ಆಸ್ಟೋರ್ ಜಿಲ್ಲೆಯಿಂದ ಒಂದು ಸಾವು ವರದಿಯಾಗಿದೆ. ಚಿಲಾಸ್‌ನ ಮಿನಾರ್ ಪ್ರದೇಶದ ಸಿಂಧೂ ನದಿಯಿಂದ ಮಹಿಳೆಯ ಶವ ಪತ್ತೆಯಾಗಿದ್ದು, ಬಾಬುಸರ್ ಹೆದ್ದಾರಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರಲ್ಲಿ ಆಕೆಯೂ ಒಬ್ಬಳಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಬಾಬುಸರ್ ಹೆದ್ದಾರಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರಲ್ಲಿ ಒಬ್ಬರ ಶವ ಇರಬಹುದು ಎಂದು ಅಧಿಕಾರಿ ಫೈಜುಲ್ಲಾ ಫರಾಕ್ ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಬಾಬುಸರ್ ಕಣಿವೆಯಲ್ಲಿ ಇನ್ನೂ 10 ರಿಂದ 12 ಪ್ರವಾಸಿಗರು ಕಾಣೆಯಾಗಿದ್ದಾರೆ ಎಂದು ನಂಬಲಾಗಿದೆ ಮತ್ತು ಪಾಕಿಸ್ತಾನ ಸೇನೆ, ಜಿಲ್ಲಾ ಅಧಿಕಾರಿಗಳು ಮತ್ತು ಇತರ ಏಜೆನ್ಸಿಗಳ ನೇತೃತ್ವದಲ್ಲಿ ಶೋಧ ಕಾರ್ಯ ಮುಂದುವರೆದಿದೆ ಎಂದು ಫರಾಕ್ ಹೇಳಿದ್ದಾರೆ.
ಫೇರಿ ಮೆಡೋಸ್‌ನಲ್ಲಿ ಸಿಲುಕಿರುವ ಹೆಚ್ಚಿನ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪಿಒಜಿಬಿಯಲ್ಲಿನ ಪ್ರವಾಹದಿಂದ ಉಂಟಾದ ಒಟ್ಟು ಹಾನಿ ಸುಮಾರು 20 ಬಿಲಿಯನ್ ಪಿಕೆಆರ್ ಎಂದು ಅಂದಾಜಿಸಲಾಗಿದೆ. ಈ ಪ್ರದೇಶವು ಅನುದಾನ ಮತ್ತು ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಪ್ರಾಂತೀಯ ಸರ್ಕಾರವು ಇದನ್ನು ನಿಭಾಯಿಸಲು ಸಾಧ್ಯವಿಲ್ಲದ ಕಾರಣ ಗಣನೀಯ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಅವರು ಫೆಡರಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶನಿವಾರ ಈ ಪ್ರದೇಶದ ಪ್ರಾಂತೀಯ ಸರ್ಕಾರದ ಮುಖ್ಯಮಂತ್ರಿ ಹಾಜಿ ಗುಲ್ಬರ್ ಖಾನ್, ಫೆಡರಲ್ ಸರ್ಕಾರಕ್ಕೆ 7 ಬಿಲಿಯನ್ ಪಿಕೆಆರ್ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಇದು ಏಳು ಜಿಲ್ಲೆಗಳಲ್ಲಿ ವ್ಯಾಪಕವಾದ ಹಾನಿಯಾಗಿದೆ ಎಂಬುದನ್ನು ಎತ್ತಿ ತೋರಿಸಿದೆ. ಡೈಮರ್ ಅತ್ಯಂತ ತೀವ್ರವಾಗಿ ಹಾನಿಗೊಳಗಾಗಿದೆ ಎಂದು ಡಾನ್ ವರದಿ ಮಾಡಿದೆ. ಈ ಪ್ರದೇಶದಲ್ಲಿ ಪ್ರವಾಹಗಳು ಈಗ ಬಹುತೇಕ ದೈನಂದಿನ ಘಟನೆಯಾಗಿದೆ ಎಂದು ಖಾನ್ ಹೇಳಿದ್ದಾರೆ.