
ಬಿಜೆಪಿ ಸರ್ಕಾರ 2021ರಲ್ಲಿ ರಾಜ್ಯದಲ್ಲಿ ಜಾರಿಗೊಳಿಸಿದ ಎನ್ಇಪಿಯನ್ನು (NEP) ತೆಗೆದುಹಾಕಿ ಎಸ್ಇಪಿ (SEP) ಅನುಸರಿಸುವ ಬಗ್ಗೆ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಆಶ್ವಾಸನೆ ಕೊಟ್ಟಿತ್ತು. ಪ್ರಣಾಳಿಕೆಯಲ್ಲಿ ಹೇಳಿದ ಹಾಗೆಯೇ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಎನ್ಇಪಿ ಬದಲು ಎಸ್ಇಪಿ ಜಾರಿ ತರಲು ಸಕಲ ತಯಾರಿ ಮಾಡಿ ಕೊಂಡು ಪ್ರೊ. ಸುಖದೇವ್ ಥೋರಟ್ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿತ್ತು. ಆದರೆ, ಆ ಆಯೋಗ ಮಧ್ಯಂತರ ವರದಿ ಸಲ್ಲಿಕೆ ಮಾಡಿ ಮೌನವಾಗಿತ್ತು. ಈಗ ಕೊನೆಗೂ ಎರಡು ದಿನಗಳ ಹಿಂದೆ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ ಮಾಡಿದೆ. ಸುದೀರ್ಘ ವರದಿಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗಳಿಗೆ ಮಹತ್ವದ ಸಲಹೆಗಳನ್ನು ಶಿಫಾರಸು ಮಾಡಿದೆ. ಆದರೆ ಈ ಸಮಿತಿಯ ಕೆಲವು ಶಿಫಾರಸ್ಸುಗಳೇ ಕೆಲವು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ.
ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ನೆರವು, ಮುಸ್ಲಿಂ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿಸಲು ಪ್ರೋತ್ಸಾಹ
ಎರಡು ದಿನಗಳ ಹಿಂದೆ ರಾಜ್ಯ ಪಠ್ಯಕ್ರಮ ಸಮಿತಿ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ವಿಚಾರದಲ್ಲಿ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಈ ಪೈಕಿ, ಲ್ಲ ಕಡಿಮೆ ಆದಾಯದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ಬೆಂಬಲ ನೀಡುವಂತೆ ಹಾಗೂ ಗ್ರಾಮೀಣ ಮುಸ್ಲಿಂ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿಸಲು ಪ್ರೋತ್ಸಾಹ ನೀಡುವಂತೆ ಶಿಫಾರಸು ಮಾಡಿದೆ. ಸದ್ಯ ಇದು ಕೆಲವು ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಹಿಂದೂಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರ ಧರ್ಮದ ಪರವಾದ ವರದಿ ಜಾರಿ ಮಾಡದಂತೆ ಆಗ್ರಹ ವ್ಯಕ್ತವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು , ಧರ್ಮ ಜಾತಿ ಓಲೈಕೆ ಮಾಡುವುದು ಆರ್ಟಿಇ ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ಎಸ್ಇಪಿ ವರದಿಗೆ ವ್ಯಾಪಕ ವಿರೋಧ ಕೇಳಿ ಬರುತ್ತಿದೆ. ಖಾಸಗಿ ಶಾಲಾ ಸಂಘಟನೆ ಹಾಗೂ ಪೋಷಕರಿಂದಲೂ ವಿರೋಧ ಕೇಳಿ ಬಂದಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಎಸ್ಇಪಿ ಸಮಿತಿ ವರದಿ ಸಲ್ಲಿಕೆ ಜೊತೆಗೆ ಕೆಲವು ಶಿಫಾರಸುಗಳನ್ನೂ ಮಾಡಿದ್ದು, ಈಗ ಇದರಲ್ಲಿನ ಕೆಲವು ಅಂಶಗಳು ಧರ್ಮ ದಂಗಲ್ಗೆ ಕಾರಣವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.