
ಬಂಟ್ವಾಳ ತಾಲೂಕು ಕಚೇರಿಗೆ ಬುಧವಾರ ಮಧ್ಯಾಹ್ನದ ಬಳಿಕ ಲೋಕಾಯುಕ್ತ ದಾಳಿ ನಡೆದಿದ್ದು, ಉಪತಹಶಿಲ್ದಾರ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.
ಉಪತಹಶಿಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಅವರನ್ನು ವಶಕ್ಕೆ ಪಡೆದರು. ಸಜೀಪಮುನ್ನೂರು ನಿವಾಸಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಿ.ಸಿ. ರೋಡಿನ ದೇವಸ್ಥಾನವೊಂದರ ಬಳಿ ಮಧ್ಯವರ್ತಿಯ ಮೂಲಕ ಹಣದ ವ್ಯವಹಾರ ನಡೆಯುವ ಸಂದರ್ಭ ಆರೋಪಿಗಳನ್ನು ವಶಕ್ಕೆ ಪಡೆದು ಸುದೀರ್ಘ ಕಾಲ ವಿಚಾರಣೆ ನಡೆಸಲಾಯಿತು.
ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಗಾನಾ ಪಿ.ಕುಮಾರ್, ಸುರೇಶ್ ಕುಮಾರ್, ಇನ್ಸ್‌ಪೆಕ್ಟರ್ ಚಂದ್ರಶೇಖರ, ಭಾರತಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಮಾಧ್ಯಮದವರಿಗೆ ಮಾಹಿತಿ ನೀಡಿದ ಪ್ರಭಾರ ಎಸ್ಪಿ ಕುಮಾರಚಂದ್ರ, ಪ್ರಕರಣದಲ್ಲಿ ತಹಶಿಲ್ದಾರ್ ಪಾತ್ರ ಈವರೆಗೆ ಕಂಡುಬಂದಿಲ್ಲ. ಈ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.
ಏನಿದು ದೂರು: ಪೌತಿ ಖಾತೆ ವಿಚಾರವಾಗಿ ಹಣ ಬೇಡಿಕೆ ಇಟ್ಟ ಪ್ರಕರಣವಿದು. ದೂರುದಾರರು ತನ್ನ ತಾಯಿಯ ಪೌತಿ ಖಾತೆಯ ವಿಚಾರವಾಗಿ 2021ನೇ ಇಸವಿಯಲ್ಲಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು, ಜಿಲ್ಲಾಧಿಕಾರಿಯವರ ನ್ಯಾಯಾಲಯವು ಜಮೀನು ಮಂಜೂರಾತಿ ಆದೇಶವನ್ನು ಪುರಸ್ಕರಿಸಿತ್ತು. ಜಿಲ್ಲಾಧಿಕಾರಿಯವರ ನ್ಯಾಯಾಲಯದ ಆದೇಶದಂತೆ ಸಹಾಯಕ ಆಯುಕ್ತರ ನ್ಯಾಯಾಲಯವು ದೂರುದಾರರ ಪೌತಿ ಖಾತೆ ಮಾಡಿಕೊಡಲು ಬಂಟ್ವಾಳ ತಹಶಿಲ್ದಾರ್ಗೆ ಆದೇಶ ನೀಡಿತ್ತು.
ಆ ಕಡತವನ್ನು 2025ರ ಏಪ್ರಿಲ್ ತಿಂಗಳಿನಿಂದ ಬಂಟ್ವಾಳ ತಹಶಿಲ್ದಾರ್ ಕಚೇರಿಯಲ್ಲಿ ಬಾಕಿ ಇಟ್ಟುಕೊಂಡಿದ್ದು, ಈ ಕುರಿತು ಬಂಟ್ವಾಳ ಉಪತಹಶಿಲ್ದಾರ್ ರಾಜೇಶ್ ನಾಯ್ಕ್ ಮತ್ತು ಕೇಸ್ ವರ್ಕರ್ ಸಂತೋಷ್ ಅವರಲ್ಲಿ ದೂರುದಾರರು ವಿಚಾರಿಸಿದರು. ಈ ಸಂದರ್ಭ, ಸಂತೋಷ್ ಪೌತಿ ಖಾತೆ ಮಾಡಲು 1500 ರೂ. ಹಾಗೂ ಉಪತಹಶಿಲ್ದಾರ್ ರಾಜೇಶ್ ನಾಯ್ಕ್ ಪೌತಿ ಖಾತೆ ಮಾಡಿಕೊಡಲು 20 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತರಿಗೆ ದೂರುದಾರರು ಸಾಕ್ಷಿ, ಪುರಾವೆಗಳೊಂದಿಗೆ ಮಾಹಿತಿ ನೀಡಿದ್ದರು.
ಬಂಟ್ವಾಳ ಉಪತಹಶಿಲ್ದಾರ್ ರಾಜೇಶ್ ನಾಯ್ಕ್, ಬ್ರೋಕರ್ ಗಣೇಶ್ ವಾಮದಪದವು ಮೂಲಕ 20 ಸಾವಿರ ರೂ.ಗಳ ಲಂಚದ ಹಣವನ್ನು ಬಿ.ಸಿ .ರೋಡಿನ ತಾಲೂಕು ಕಚೇರಿ ಬಳಿ ದೇವಸ್ಥಾನವೊಂದರ ಸಮೀಪ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉಪತಹಶಿಲ್ದಾರ್ ರಾಜೇಶ್ ನಾಯ್ಕ್, ಕೇಸ್ ವರ್ಕರ್ ಸಂತೋಷ್, ಬ್ರೋಕರ್ ಗಣೇಶ್ ವಾಮದಪದವು ಅವರನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ. ಕುಮಾರ್, ಸುರೇಶ್ ಕುಮಾರ್ .ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಬಿ, ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.