
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಸೋಮವಾರ ವಾಷಿಂಗ್ಟನ್‌ನಲ್ಲಿ ಭೇಟಿ ಮಾಡಲಿದ್ದಾರೆ. ಅವರೊಂದಿಗೆ ಹಲವಾರು ಯುರೋಪಿಯನ್ ನಾಯಕರು ಭಾಗಿಯಾಗಲಿದ್ದಾರೆ.
ಫ್ರಾನ್ಸ್, ಜರ್ಮನಿ, ಯುಕೆ, ಇಟಲಿ ಮತ್ತು ಫಿನ್‌ಲ್ಯಾಂಡ್‌ನ ನಾಯಕರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಕೂಡ ನಿಯೋಗದ ಭಾಗವಾಗಿರುತ್ತಾರೆ ಎಂದು ತಿಳಿದು ಬಂದಿದೆ.
ಉಕ್ರೇನ್‌ನ ಪ್ರಮುಖ ಹಿತಾಸಕ್ತಿಗಳು ಮತ್ತು ಯುರೋಪಿನ ಭದ್ರತೆ ಕಾಪಾಡುವ ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸಾಧಿಸುವ ಗುರಿಯೊಂದಿಗೆ ಯುರೋಪಿಯನ್ನರು ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಮನ್ವಯದ ಕೆಲಸವನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಂದುವರಿಸುತ್ತಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರ ಕಚೇರಿಯು ಉಕ್ರೇನ್‌ನಲ್ಲಿನ ಶಾಂತಿ ಪ್ರಯತ್ನಗಳ ಸ್ಥಿತಿಯನ್ನು ಇತರ ಹಾಜರಿದ್ದವರೊಂದಿಗೆ ಚರ್ಚಿಸುವುದಾಗಿ ಮತ್ತು ತ್ವರಿತ ಶಾಂತಿ ಒಪ್ಪಂದದಲ್ಲಿ ಜರ್ಮನಿಯ ಆಸಕ್ತಿ ಎತ್ತಿ ತೋರಿಸುವುದಾಗಿ ಹೇಳಿದೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಝೆಲೆನ್ಸ್ಕಿಯವರ ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಬಯಕೆ ಯನ್ನು ಶ್ಲಾಘಿಸಿದ್ದಾರೆ ಮತ್ತು ಸಭೆಗಾಗಿ ವಾಷಿಂಗ್ಟನ್‌ಗೆ ಸಹ ಪ್ರಯಾಣಿಸುವುದಾಗಿ ಹೇಳಿದ್ದಾರೆ.
ಶುಕ್ರವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲಾಸ್ಕಾದಲ್ಲಿ ಸಭೆ ಸೇರಿ ಮಾತುಕತೆ ನಡೆಸಿದರು. ಈ ವೇಳೆ ಉಕ್ರೇನ್‌ಗೆ ಅಮೆರಿಕದ ಭದ್ರತಾ ಖಾತರಿಗಳನ್ನು ನೀಡಲು ಪುಟಿನ್ ಒಪ್ಪಿಕೊಂಡರು. ಟ್ರಂಪ್ ಅವರೊಂದಿಗಿನ ಶೃಂಗಸಭೆಯ ಸಮಯದಲ್ಲಿ ಸಂಭಾವ್ಯ ಶಾಂತಿ ಒಪ್ಪಂದದ ಭಾಗವಾಗಿ ಭೂ ವಿನಿಮಯದ ಬಗ್ಗೆ ಸಮಾಲೋಚಿಸಲಾಗಿದೆ ಎಂದು ಟ್ರಂಪ್ ಅವರ ಉನ್ನತ ರಾಯಭಾರಿ ಸ್ಟೀವ್ ವಿಟ್ಕಾಫ್ ಹೇಳಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಆದರೆ, ರಷ್ಯಾ ಇನ್ನೂ ಅಂತಹ ಒಪ್ಪಂದಗಳನ್ನು ಉಲ್ಲೇಖಿಸಿಲ್ಲ, ಇದು ಪುಟಿನ್ ಅವರ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿದೆ.
ಇಂದು ಟ್ರಂಪ್ ಮತ್ತು ಝೆಲೆನ್ಸ್ಕಿಪ್ರತ್ಯೇಕ ಭೇಟಿ : ಟ್ರಂಪ್ ಮತ್ತು ಝೆಲೆನ್ಸ್ಕಿ ಮೊದಲು ತಮ್ಮ ನಿಯೋಗಗಳೊಂದಿಗೆ ಪ್ರತ್ಯೇಕವಾಗಿ ಭೇಟಿಯಾಗುವ ನಿರೀಕ್ಷೆಯಿದೆ. ಝೆಲೆನ್ಸ್ಕಿ ಹಾಗೂ ಯುರೋಪಿಯನ್ ನಾಯಕರ ನಿಯೋಗ ಸಭೆ ಸೇರುವ ಮೊದಲು ಮತ್ತು ಭೇಟಿ ನೀಡುವ ಯುರೋಪಿಯನ್ ನಾಯಕರೊಂದಿಗೆ ಸಂಭಾವ್ಯವಾಗಿ ಭೋಜನ ಕೂಟಕ್ಕೂ ಮೊದಲು ಪ್ರತ್ಯೇಕ ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಭೂ ವಿನಿಮಯ ಹಾಗೂ ರಿಯಾಯಿತಿಗಳ ಮೇಲಿನ ರಷ್ಯಾದ ಬೇಡಿಕೆಗಳು ಮತ್ತು ಉಕ್ರೇನ್‌ಗೆ ಭದ್ರತಾ ಖಾತರಿಗಳ ಬಾಹ್ಯರೇಖೆಗಳ ಮೇಲೆ ಮಾತುಕತೆಗಳು ಹಾಗೂ ಚರ್ಚೆ ನಡೆಯುವ ನಿರೀಕ್ಷೆ ಇದೆ. ಟ್ರಂಪ್ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ತ್ರಿಪಕ್ಷೀಯ ಸಭೆಯನ್ನು ಖಚಿತಪಡಿಸಿಕೊಳ್ಳಲು ಹತ್ತಿರದಲ್ಲಿದ್ದಾರೆ ಎಂದು ವಿಟ್ಕಾಫ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ.