Country
Trending

ಮತಗಳ್ಳತನ ಆರೋಪ ಸಂಬಂಧ ರಾಹುಲ್‌ ಗಾಂಧಿ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು

“ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಳು ದಿನಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು, ಇಲ್ಲದಿದ್ದರೆ ಅವರ ‘ಮತಗಳ್ಳತನ’ ಆರೋಪ ಆಧಾರರಹಿತವಾದವು ಎಂದು ಪರಿಗಣಿಸಲಾಗುತ್ತದೆ. ಆಧಾರರಹಿತ ಆರೋಪಗಳನ್ನು ಮಾಡುವವರು ದೇಶಕ್ಕೆ ಕ್ಷಮೆಯಾಚಿಸಬೇಕು” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭಾನುವಾರ ಹೇಳಿದರು.

ದೆಹಲಿಯಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಆ ಕ್ಷೇತ್ರದ ಮತದಾರರಲ್ಲದ ಯಾರಾದರೂ ದೂರು ದಾಖಲಿಸಲು ಬಯಸಿದರೆ, ಪ್ರಮಾಣಪತ್ರ ಸಲ್ಲಿಸಬೇಕು. ಚುನಾವಣಾ ಆಯೋಗ ಅಥವಾ ಮತದಾರರು ಡಬಲ್ ವೋಟಿಂಗ್ ಮತ್ತು ವೋಟ್ ಚೋರಿ ಆರೋಪಗಳಿಗೆ ಹೆದರುವುದಿಲ್ಲ” ಎಂದರು.

“ಡಬಲ್ ವೋಟಿಂಗ್ ಮತ್ತು “ಮತಗಳ್ಳತನ” ಆರೋಪಗಳು ಆಧಾರರಹಿತ. ಸಂಬಂಧಪಟ್ಟ ಎಲ್ಲರೂ ವಿಶೇಷ ತೀವ್ರ ಪರಿಷ್ಕರಣೆಯನ್ನು ಪಾರದರ್ಶಕ ರೀತಿಯಲ್ಲಿ ಯಶಸ್ವಿಗೊಳಿಸಲು ಕೆಲಸ ಮಾಡುತ್ತಿದ್ದಾರೆ. ಕೆಲವು ಪಕ್ಷಗಳು ಮತ್ತು ನಾಯಕರು ವಿಶೇಷ ತೀವ್ರ ಪರಿಷ್ಕರಣೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವುದು ಕಳವಳಕಾರಿ. ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯ ಕುರಿತು ಹಕ್ಕು ಮತ್ತು ದೂರುಗಳನ್ನು ಸಲ್ಲಿಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ಇದಕ್ಕೆ ಇನ್ನೂ 15 ದಿನ ಸಮಯಾವಕಾಶವಿದೆ” ಎಂದು ತಿಳಿಸಿದರು.

“ಚುನಾವಣಾ ಆಯೋಗದ ಬಾಗಿಲುಗಳು ಎಲ್ಲರಿಗೂ ತೆರೆದಿರುತ್ತವೆ. ಮತ್ತು ಬೂತ್ ಮಟ್ಟದ ಅಧಿಕಾರಿಗಳು, ಏಜೆಂಟರು ಪಾರದರ್ಶಕ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳು ಎರಡೂ ಚುನಾವಣಾ ಆಯೋಗದ ಮುಂದೆ ಸಮಾನ” ಎಂದು ಸ್ಪಷ್ಟಪಡಿಸಿದರು.

“45 ದಿನಗಳೊಳಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸದೇ ಮತ ಚೋರಿ ಎಂದು ಆರೋಪ ಮಾಡಿದರೆ ಅದು ಭಾರತೀಯ ಸಂವಿಧಾನಕ್ಕೆ ಮಾಡುವ ಅವಮಾನ. ಡಬಲ್ ವೋಟಿಂಗ್ ಮತ್ತು “ವೋಟ್ ಚೋರಿ” ಎಂಬ ಆಧಾರರಹಿತ ಆರೋಪಗಳಿಗೆ ಚುನಾವಣಾ ಆಯೋಗ ಅಥವಾ ಮತದಾರರು ಹೆದರುವುದಿಲ್ಲ. ಕೆಲವರು ಮಾಡುವ ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಚುನಾವಣಾ ಆಯೋಗ ಎಲ್ಲಾ ವರ್ಗದ ಮತದಾರರೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.

ರಾಹುಲ್​ ಮಾಡಿದ್ದ ಆರೋಪ ಏನು? ಜುಲೈ 31 ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಧ್ಯಮಗೋಷ್ಟಿ ನಡಸಿ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾರರು, ನಕಲಿ ಮತ್ತು ಅಮಾನ್ಯ ವಿಳಾಸಗಳು, ಏಕ ವಿಳಾಸದ ಮತದಾರರು ಸೇರಿದಂತೆ ಐದು ರೀತಿಯ ಅಕ್ರಮದ ಮೂಲಕ 1 ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು 2024ರ ಲೋಕಸಭಾ ಚುನಾವಣೆಯ ಉಲ್ಲೇಖಿಸಿ ಆರೋಪಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button