
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ವಿರೋಧಿ ಕಾರ್ಯಾಚರಣೆಯಲ್ಲಿ ಉಗ್ರರ ಮೇಲೆ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಗುರೆಜ್ ವಲಯದ ನೌಶೆಹ್ರಾ ನಾರ್ದ್ ಬಳಿ ಒಳನುಸುಳುವಿಕೆ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದ್ದು, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿನ ಈ ಸೇನಾ ಕಾರ್ಯಾಚರಣೆಯ ಜವಾಬ್ದಾರಿ ಹೊಂದಿರುವ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ”ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ” ಎಂದು ತಿಳಿಸಿದೆ.
”ಆಪರೇಷನ್ ನೌಶೇರ್ ನಾರ್ IV, ಬಂಡಿಪೋರಾ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಪ್ತಚರ ಮಾಹಿತಿ ಮೇರೆಗೆ ಗುರೆಜ್ನಲ್ಲಿ ಒಳನುಸುಳಿಕೆ ಪ್ರಯತ್ನವನ್ನು ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹತ್ತಿಕ್ಕಿದ್ದಾರೆ. ಜಾಗೃತ ಪಡೆಗಳು ಅನುಮಾನಾಸ್ಪದ ಚಟುವಟಿಕೆ ಗಮನಿಸಿ, ಗುಂಡಿನ ದಾಳಿ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ” ಎಂದು ಸೇನಾ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಮತ್ತೊಂದು ಪೋಸ್ಟ್ನಲ್ಲಿ, ಚಿನಾರ್ ಕಾರ್ಪ್ಸ್ ಕುಪ್ವಾರಾ ಜಿಲ್ಲೆಯಲ್ಲಿ ಕರ್ತವ್ಯದ ವೇಳೆ ಯೋಧರೊಬ್ಬರು ಹುತಾತ್ಮರಾದ ಕುರಿತು ಪೋಸ್ಟ್ ಮಾಡಿದೆ. ”ಕುಪ್ವಾರಾ ಜಿಲ್ಲೆಯಲ್ಲಿ ಕಾರ್ಯಾಚರಣೆಯ ವೇಳೆ ಹವಿಲ್ದಾರ್ ಇಕ್ಬಾಲ್ ಅಲಿ ಹುತಾತ್ಮರಾಗಿದ್ದು, ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಸದಾ ಸ್ಪೂರ್ತಿ ನೀಡಲಿದೆ” ಎಂದು ಹೇಳಿದೆ.
ಹಾಗೆಯೇ, ವೀರ ಯೋಧನ ದುಃಖಿತ ಕುಟುಂಬದೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಅವರ ಯೋಗಕ್ಷೇಮಕ್ಕೆ ಬದ್ಧರಾಗಿದ್ದೇವೆ ಎಂದು ಕೂಡ ತಿಳಿಸಿದೆ.