
ಇಲ್ಲಿನ ವಿರಾರ್ನಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಬುಧವಾರ ಕಟ್ಟಡ ಕುಸಿದಿದ್ದು, ಕಳೆದೆರಡು ದಿನಗಳಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಮತ್ತೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ವಿರಾರ್ ಪ್ರದೇಶದ ವಿಜಯ್ ನಗರದಲ್ಲಿ 50 ಫ್ಲಾಟ್ಗಳಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ಬುಧವಾರ ಬೆಳಗಿನ ಜಾವ 12.05ರ ವೇಳೆಗೆ ಪಕ್ಕದ ಖಾಲಿ ಮನೆಯ ಮೇಲೆ ಕುಸಿದು ಬಿದ್ದಿತ್ತು. ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ 12 ಫ್ಲಾಟ್ ಇದ್ದು, ಅದರಲ್ಲಿ ಒಂದು ಮನೆಯಲ್ಲಿ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿತ್ತು. ಅದರ ಒಂದು ಬದಿಯು ಕುಸಿದಿದ್ದು, ನಿವಾಸಿಗಳು ಹಾಗೂ ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಅತಿಥಿಗಳು ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದೆ ಎಂದು ಗುರುವಾರ ಬೆಳಗ್ಗೆ ಪಾಲ್ಗಾರ್ ಜಿಲ್ಲಾಧಿಕಾರಿ ಡಾ. ಇಂದು ರಾಣಿ ಜಾಖರ್ ಅವರು ಸುದ್ದಿಸಂಸ್ಥೆ ಪಿಟಿಐಗೆ ದೃಢಪಡಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಇತರೆ ರಕ್ಷಣಾ ತಂಡಗಳು ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರೆಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ 5ನೇ ಬೆಟಾಲಿಯನ್‌ನ ಎರಡು ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆರಂಭಿಕ ಮಾಹಿತಿ ಮತ್ತು ಶ್ವಾನದಳದಿಂದ ಹುಡುಕಾಟ ನಡೆಸಿದಾಗ, ಅವಶೇಷಗಳ ಅಡಿ ಸಿಲುಕಿದ್ದ ನಾಲ್ವರನ್ನು ಹೊರತೆಗೆಯಲಾಯಿತು. ಈ ವೇಳೆ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ.
ಘಟನೆ ಕುರಿತು ಮಾತನಾಡಿರುವ ಎನ್‌ಡಿಆರ್‌ಎಫ್ ಉಪ ಕಮಾಂಡರ್, ಅಪಘಾತದ ಸ್ಥಳದಲ್ಲಿ ಎರಡು ಎನ್‌ಡಿಆರ್‌ಎಫ್ ತಂಡಗಳು ಬೀಡುಬಿಟ್ಟಿದ್ದು, ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಒಂದು ತಂಡ ಮುಂಬೈನಿಂದ ಮತ್ತು ತಂಡ ಪಾಲ್ಘರ್ನಿಂದ ಬಂದಿದೆ. ಅವಘಡದ ವರದಿ ಬೆನ್ನಲ್ಲೇ ಹತ್ತಿರದಲ್ಲಿದ್ದ ಎನ್‌ಡಿಆರ್‌ಎಫ್ ತಂಡ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದೆ ಎಂದು ಮಾಹಿತಿ ನೀಡಿದರು.
ಎನ್‌ಡಿಆರ್‌ಎಫ್ ಜೊತೆಗೆ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ತುರ್ತು ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಜನಸಂದಣಿ ನಿಯಂತ್ರಿಸಲು ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಜೊತೆಗೆ, ಪಕ್ಕದ ಕಟ್ಟಡದ ಸುರಕ್ಷತೆಯ ಬಗ್ಗೆಯೂ ಎಚ್ಚರ ವಹಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಕ್ಕದ ಕಟ್ಟಡಗಳ ಹಲವಾರು ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ದುರಂತದಲ್ಲಿ ರಕ್ಷಣೆ ಮಾಡಿದ ಸಂತ್ರಸ್ತರನ್ನು ವಿರಾರ್ ಮತ್ತು ನಲಸೋಪಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಇನ್ನೆಷ್ಟು ಜನರು ಸಿಲುಕಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಹುಡುಕಾಟ ಮುಂದುವರೆಸಿದ್ದಾರೆ. ಹಾಗೆಯೇ, ಕಟ್ಟಡ ಕುಸಿತದ ಹಿಂದಿನ ಕಾರಣದ ಕುರಿತು ತನಿಖೆ ಸಾಗಿದೆ.