ಇತ್ತೀಚಿನ ಸುದ್ದಿ
Trending

'ಇಡೀ ಗ್ರಾಮವೇ ಒಂದು ಮನೆಯ ನಿವಾಸಿಗಳು'; ಚುನಾವಣಾ ಆಯೋಗದ ವಿರುದ್ಧ ಮತ್ತೆ ರಾಹುಲ್​ ಆರೋಪ

ಬಿಹಾರದಲ್ಲಿ ಮತಗಳ್ಳತನದ ಆರೋಪ ಮಾಡುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇದೀಗ ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಗಯಾ ಜಿಲ್ಲೆಯ ಇಡೀ ಗ್ರಾಮವನ್ನು ಒಂದೇ ಮನೆಯಲ್ಲಿ ವಾಸಿಸುತ್ತಿರುವುದಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯಾದ್ಯಂತ ಮತದಾರರ ಅಧಿಕಾರ​​ ಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಹಂಚಿಕೊಂಡಿದ್ದಾರೆ. ‘ಚುನಾವಣಾ ಆಯೋಗದ ಮ್ಯಾಜಿಕ್​ ನೋಡಿ.. ಸಂಪೂರ್ಣ ಗ್ರಾಮವೂ ಒಂದೇ ಮನೆಯಲ್ಲಿ ವಾಸಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘ಬರಾಚಟ್ಟಿ ವಿಧಾನಸಭಾ ಕ್ಷೇತ್ರದ ಗಯಾ ಜಿಲ್ಲೆಯ ನಿಡಾನಿ ಗ್ರಾಮದ ಒಂದು ಬೂತ್‌ನಲ್ಲಿ ಎಲ್ಲಾ 947 ಮತದಾರರು ಮನೆ ಸಂಖ್ಯೆ 6ರಲ್ಲಿ ಒಟ್ಟಿಗೆ ನಿವಾಸ ಮಾಡುತ್ತಿರುವುದಾಗಿ ತೋರಿಸಲಾಗಿದೆ’ ಎಂದು ಎಕ್ಸ್​ ಜಾಲತಾಣದಲ್ಲಿ ಅವರು ಪೋಸ್ಟ್​ ಮಾಡಿದ್ದಾರೆ.

‘ಇದು ಒಂದು ಗ್ರಾಮದ ವಿಚಾರವಾಗಿದೆ. ಈ ಮೂಲಕ ಇಡೀ ರಾಜ್ಯ ಮತ್ತು ದೇಶದಲ್ಲಿನ ಅಕ್ರಮಗಳ ಪ್ರಮಾಣವನ್ನು ಊಹೆ ಮಾಡಬಹುದು’ ಎಂದು ಆರೋಪಿಸಿದ್ದಾರೆ.

ರಾಹುಲ್​ ಗಾಂಧಿ ಆರೋಪದ ಸಂಬಂಧ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ, ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಎಕ್ಸ್ ಹ್ಯಾಂಡಲ್‌ನಲ್ಲಿ ಸ್ಪಷ್ಟೀಕರಣ ನೀಡಲಾಗಿದೆ. ‘ಮನೆಗಳಿಗೆ ನಿಜವಾದ ಸರಣಿ ಸಂಖ್ಯೆಗಳಿಲ್ಲದ ಹಳ್ಳಿಗಳು ಅಥವಾ ಕೊಳೆಗೇರಿ ಸಮೂಹಗಳಲ್ಲಿ ಒಂದು ಮನೆ ಸಂಖ್ಯೆಯನ್ನು ನೀಡಲಾಗುತ್ತದೆ. ಮತದಾರರನ್ನು ಸೇರಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ರೀತಿ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.

ಗ್ರಾಮದ ನಿವಾಸಿಗಳೆಂದು ಹೇಳಲಾದ ವಿಡಿಯೋ ತುಣುಕುಗಳನ್ನು ಜಿಲ್ಲಾಧಿಕಾರಿಯ ಎಕ್ಸ್​ನಲ್ಲಿ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ‘ಇದರಲ್ಲಿ ಜನರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಬಗ್ಗೆ ತೃಪ್ತರಾಗಿದ್ದಾರೆ. ಆದರೆ, ಪ್ರದೇಶಕ್ಕೆ ಕಳಂಕ ತರುವ ಪ್ರಯತ್ನಗಳಿಂದ ಅಸಮಾಧಾನಗೊಂಡಿದ್ದಾರೆ’ ಎಂದು ಹೇಳಲಾಗಿದೆ.

ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಮೂಲಕ ಮತ ಕಳ್ಳತನ ನಡೆದಿದೆ ಎಂದು ರಾಹುಲ್​ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಸಂಸತ್​ ಅಧಿವೇಶನದಲ್ಲೂ ಕೂಡ ಇಂಡಿಯಾ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸಿದ್ದರು.

ಇದರ ಜೊತೆಗೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಬಿಹಾರದಲ್ಲಿ ಮತ ಅಧಿಕಾರ ಯಾತ್ರೆ ಕೈಗೊಂಡಿದ್ದು, ಅದು ಸೆಪ್ಟೆಂಬರ್​ 1ಕ್ಕೆ ಅಂತ್ಯವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button