World
Trending

ಜಪಾನ್ ಗವರ್ನರ್‌ಗಳ ಜೊತೆ ಮೋದಿ ಸಭೆ: ಭಾರತ-ಜಪಾನ್ ರಾಜ್ಯ-ಪ್ರಾಂತ್ಯ ಸಹಕಾರ ಬಲಪಡಿಸಲು ಕರೆ

ಜಪಾನ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟೋಕಿಯೊದಲ್ಲಿ ಅಲ್ಲಿನ 16 ಪ್ರಾಂತ್ಯಗಳ ಗವರ್ನರ್‌ಗಳ ಜೊತೆ ಸಂವಾದ ನಡೆಸಿದರು. ಈ ವೇಳೆ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಡಿ ರಾಜ್ಯ-ಪ್ರಾಂತ್ಯ ಸಹಕಾರವನ್ನು ಬಲಪಡಿಸುವಂತೆ ಮೋದಿ ಕರೆ ನೀಡಿದರು.

“ಇಂದು ಬೆಳಗ್ಗೆ ಟೋಕಿಯೊದಲ್ಲಿ, ಜಪಾನ್‌ನ 16 ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಸಂವಾದ ನಡೆಸಲಾಗಿದೆ. ರಾಜ್ಯ-ಪ್ರಾಂತ್ಯ ಸಹಕಾರವು ಭಾರತ-ಜಪಾನ್ ಸ್ನೇಹದ ಪ್ರಮುಖ ಆಧಾರಸ್ತಂಭವಾಗಿದೆ. ನಿನ್ನೆ ನಡೆದ 15ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಇದರ ಕುರಿತು ಪ್ರತ್ಯೇಕ ಉಪಕ್ರಮವನ್ನು ಪ್ರಾರಂಭಿಸಲಾಯಿತು. ವ್ಯಾಪಾರ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕರಿಸಲು ಅಪಾರ ಅವಕಾಶವಿದೆ. ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಮತ್ತು AIನಂತಹ ಭವಿಷ್ಯದ ವಲಯಗಳು ಸಹ ಪ್ರಯೋಜನಕಾರಿಯಾಗಬಹುದು” ಎಂದು ಪ್ರಧಾನಿ ಮೋದಿ ಎಕ್ಸ್​ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಎಕ್ಸ್​​ ಪೋಸ್ಟ್‌ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), “ಸ್ಥಿರವಾಗಿರುವ ಭಾರತ-ಜಪಾನ್ ಸಂಬಂಧಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊದಲ್ಲಿ 16 ಪ್ರಾಂತ್ಯಗಳ ಗವರ್ನರ್‌ಗಳನ್ನು ಭೇಟಿಯಾದರು” ಎಂದು ತಿಳಿಸಿದೆ.

“ರಾಜ್ಯ-ಪ್ರಾಂತ್ಯ ಪಾಲುದಾರಿಕೆ ಉಪಕ್ರಮದ ಸಾಮರ್ಥ್ಯವನ್ನು ಪ್ರಧಾನಿ ಎತ್ತಿ ತೋರಿಸಿದರು. ಮತ್ತು ಈ ನಿಟ್ಟಿನಲ್ಲಿ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಹಂಚಿಕೆಯ ಪ್ರಗತಿಗಾಗಿ ಪ್ರಾರಂಭಿಸಲಾದ ರಾಜ್ಯ-ಪ್ರಾಂತ್ಯ ಪಾಲುದಾರಿಕೆ ಉಪಕ್ರಮದ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು” ಎಂದು ಎಂಇಎ ಪೋಸ್ಟ್​ನಲ್ಲಿ ಹೇಳಿದೆ.

10 ಟ್ರಿಲಿಯನ್ ಯೆನ್ ಹೂಡಿಕೆಗೆ ಜಪಾನ್​ ಒಪ್ಪಿಗೆ: ಭಾರತದಲ್ಲಿ ಒಂದು ದಶಕದಲ್ಲಿ 10 ಟ್ರಿಲಿಯನ್ ಯೆನ್ (ಸುಮಾರು ರೂ. 60,000 ಕೋಟಿ) ಹೂಡಿಕೆ ಮಾಡುವ ಗುರಿ ಹೊಂದಿರುವುದಾಗಿ ಜಪಾನ್ ಶುಕ್ರವಾರ ತಿಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್​ ಪ್ರಧಾನಿ ಶಿಗೇರು ಇಶಿಬಾ ನಡುವಿನ ಶೃಂಗಸಭೆ ಬಳಿಕ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಕುರಿತಾದ ಹೊಸ ಕ್ರಮಗಳನ್ನು ಅನಾವರಣಗೊಳಿಸಲಾಯಿತು.

ಎರಡೂ ದೇಶಗಳು ರಕ್ಷಣಾ ವಲಯ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಹೆಚ್ಚಾಗಿ ಹೆಚ್ಚಿಸಲು 10 ವರ್ಷಗಳ ಮಾರ್ಗಸೂಚಿ ಸೇರಿದಂತೆ, ದೊಡ್ಡ ಒಪ್ಪಂದಗಳಿಗೆ ಸಹಿ ಮಾಡಿದರು. ಅಮೆರಿಕದ ವ್ಯಾಪಾರ ನೀತಿಗಳಿಂದ ವಿಶ್ವದಾದ್ಯಂತ ಉಂಟಾದ ಪ್ರಕ್ಷುಬ್ಧತೆಯ ನಡುವೆ ಈ ಮಹತ್ವದ ಒಡಂಬಿಕೆಗಳು ನಡೆದಿವೆ.

13 ಪ್ರಮುಖ ಒಪ್ಪಂದಗಳ ಮೂಲಕ ಅರೆವಾಹಕಗಳು, ಶುದ್ಧ ಇಂಧನ, ದೂರಸಂಪರ್ಕ, ಔಷಧಗಳು, ನಿರ್ಣಾಯಕ ಖನಿಜಗಳು ಮತ್ತು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಂತಹ ಕಾರ್ಯತಂತ್ರದ ವಲಯಗಳಲ್ಲಿ ಪೂರೈಕೆಯನ್ನು ಉತ್ತೇಜಿಸಲು, ಆರ್ಥಿಕ ಭದ್ರತೆ ಸೇರಿದಂತೆ ಹಲವಾರು ಪರಿವರ್ತನಾ ಉಪಕ್ರಮಗಳನ್ನು ಪ್ರಾರಂಭಿಸುವುದಾಗಿ ಉಭಯ ನಾಯಕರು ಘೋಷಿಸಿದರು.

“ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆ ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯ ಎಂದು ನಾವಿಬ್ಬರೂ ಒಪ್ಪುತ್ತೇವೆ. ಉತ್ತಮ ಜಗತ್ತನ್ನು ರೂಪಿಸುವಲ್ಲಿ ಬಲವಾದ ಪ್ರಜಾಪ್ರಭುತ್ವಗಳು ನೈಸರ್ಗಿಕ ಪಾಲುದಾರರು” ಎಂದು ಇಶಿಬಾ ಜೊತೆಗೂಡಿ ಪ್ರಧಾನಿ ಮೋದಿ ಹೇಳಿದರು.

“ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಮತ್ತು ಸುವರ್ಣ ಅಧ್ಯಾಯಕ್ಕೆ ನಾವು ಬಲವಾದ ಅಡಿಪಾಯ ಹಾಕಿದ್ದೇವೆ. ಮುಂದಿನ ದಶಕಕ್ಕೆ ನಾವು ಮಾರ್ಗಸೂಚಿಯನ್ನು ಹೊಂದಿದ್ದೇವೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಜಪಾನ್‌ನಿಂದ 10 ಟ್ರಿಲಿಯನ್ ಯೆನ್ ಹೂಡಿಕೆಯ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಮೋದಿ ವಿವರಿಸಿದರು.

Leave a Reply

Your email address will not be published. Required fields are marked *

Back to top button