ಹೈದರಾಬಾದ್ ಮೂಲದ ಸತ್ಯನಾರಾಯಣ್ ವರ್ಮಾ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಮೊದಲ ಆರೋಪಿಯಾಗಿರುವ ಹೈದರಬಾದ್ ಮೂಲದ ಸಿವಿಲ್ ಗುತ್ತಿಗೆದಾರ ಜಿ. ಸತ್ಯನಾರಾಯಣ ವರ್ಮಾ ಎಂಬುವರ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತ ಸೆಷನ್ಸ್ ನ್ಯಾಯಾಲಯದ (ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸ್ಥಾಪನೆಗೊಂಡ ವಿಶೇಷ ನ್ಯಾಯಾಲಯ) ಇಡೀ ವಿಚಾರಣಾ ಪ್ರಕ್ರಿಯೆ ರದ್ದು ಪಡಿಸಬೇಕು ಎಂದು ಕೋರಿ ಸತ್ಯನಾರಾಯಣ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ. ಪ್ರಕರಣದ ಕುರಿತು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅರ್ಜಿದಾರರನ್ನು ಪ್ರಮುಖ ಆರೋಪಿ ಎಂಬುದಾಗಿ ತಿಳಿಸಲಾಗಿದೆ. ಅರ್ಜಿದಾರರ ವಿರುದ್ದ ಪ್ರಕರಣವು ಅಧೀನ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅಲ್ಲದೇ, ಅರ್ಜಿದಾರರ ಮನೆಯಲ್ಲಿ ಲಭ್ಯವಾಗಿರುವ ಹಣಕಾಸು ಮತ್ತು ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ವಿವರಣೆ ನೀಡಿಲ್ಲ, ವಿವರಣೆ ನೀಡಿದರೂ, ಅದಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕಾಗಿದೆ. ಆದರೆ, ಅದಕ್ಕೂ ಮುನ್ನವೇ ಪ್ರಕರಣವನ್ನು ರದ್ದು ಕೋರಿ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದಾರೆ.
ಜತೆಗೆ, ಇದಕ್ಕೂ ಮುನ್ನ ತಮ್ಮ ಬಂಧನ ಅಕ್ರಮ ಎಂದು ಘೋಷಿಸುವಂತೆ ಕೋರಿ ಒಂದು ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ನ ಮತ್ತೊಂದು ಪೀಠ ವಜಾಗೊಳಿಸಿತ್ತು. ಅದಾದ ಒಂದು ವಾರ ಬಳಿಕ ಈ ಅರ್ಜಿ ಸಲ್ಲಿಸಲಾಗಿದೆ. ಒಂದು ಅರ್ಜಿಯಲ್ಲಿ ಪರಿಹಾರ ದೊರಕದಿದ್ದರೆ ಬೇರೊಂದು ಅಂಶಗಳನ್ನು ಹುಡುಕಿಕೊಂಡು ಮತ್ತೊಂದು ಹೊಸ ಅರ್ಜಿ ಸಲ್ಲಿಸುತ್ತಾ ಕಾನೂನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅರ್ಜಿದಾರರ ಈ ನಡೆಯನ್ನು ಒಪ್ಪಲಾಗದು. ವಿಚಾರಣಾ ನ್ಯಾಯಾಲಯ ವಿಚಾರಣೆ ಮುಂದುವರಿಯಬೇಕಿದ್ದು, ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
2024ರ ಮಾ.4ರಿಂದ ಮೇ 21ರ ನಡುವೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ 187.33 ಕೋಟಿ ರೂ. ಮತ್ತು 2024ರ ಮಾ.5 ಮತ್ತು ಮೇ 6ರಂದು ನಡುವೆ 94.73 ಕೋಟಿ ರೂ. ಹಣವನ್ನು ವಿವಿಧ ಸಂಸ್ಥೆಗಳ ಬ್ಯಾಂಕ್ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಅರ್ಜಿದಾರರ ಮೇಲಿದೆ. ಈ ಕುರಿತು ನಿಗಮದ ಪ್ರಧಾನ ವ್ಯಸ್ಥಾಪಕರು ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, 2024ರ ಜೂ.11ರಂದು ಅರ್ಜಿದಾರರನ್ನು ಹೈದರಬಾದ್ನಿಂದ ಬಂಧಿಸಿ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದರು. ನಂತರ ತಮ್ಮ ಬಂಧನ ಅಕ್ರಮವೆಂದು ಘೋಷಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿದಾರರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ನ ಮತ್ತೊಂದು ಪೀಠ ವಜಾಗೊಳಿಸಿತ್ತು. ಇದಾದ ಒಂದು ವಾರದ ಬಳಿಕ ಪ್ರಕರಣ ಕುರಿತ ವಿಚಾರಣಾ ನ್ಯಾಯಾಲಯ ವಿಚಾರಣೆ ರದ್ದ ಕೋರಿ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದರು.