
ದಕ್ಷಿಣ ಕೆರಿಬಿಯನ್‌ನಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದು, 11 ಮಾದಕವಸ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಂಗಳವಾರ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ಗ್ಯಾಂಗ್ ಟ್ರೆನ್ ಡಿ ಅರಾಗುವಾ ಸದಸ್ಯರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಹಡಗು ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆಯಲ್ಲಿದ್ದು, ಅಮೆರಿಕಕ್ಕೆ ಅಕ್ರಮ ಮಾದಕವಸ್ತುಗಳನ್ನು ಸಾಗಿಸುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಯಾವುದೇ ದಾಳಿಗೆ ಪ್ರತೀಕಾರ ಎಂದಿರುವ ವೆನೆಜುವೆಲಾ ಅಧ್ಯಕ್ಷ: ಇತ್ತೀಚಿನ ವಾರಗಳಲ್ಲಿ ಟ್ರಂಪ್ ಆಡಳಿತವು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಮಿಲಿಟರಿ ಮತ್ತು ರಾಜಕೀಯ ಒತ್ತಡವನ್ನು ಹೆಚ್ಚಿಸಿದೆ. ಇದರಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಅವರ ಬಂಧನಕ್ಕೆ ಕಾರಣವಾಗುವ ಮಾಹಿತಿಗಾಗಿ $50 ಮಿಲಿಯನ್ (£37 ಮಿಲಿಯನ್ ಪೌಂಡ್ ) ಬಹುಮಾನವನ್ನು ಘೋಷಿಸಲಾಗಿದೆ. ಅಮೆರಿಕದ ಯಾವುದೇ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ವೆನೆಜುವೆಲಾ ಹೋರಾಡುತ್ತದೆ ಎಂದು ಮಡುರೊ ಪ್ರತಿಜ್ಞೆ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷರು ಹೇಳಿದ್ದಿಷ್ಟು: ಮಂಗಳವಾರ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ವೆನೆಜುವೆಲಾ ಸುತ್ತಮುತ್ತಲ ಪ್ರದೇಶದಲ್ಲಿ ಅಮೆರಿಕದ ಪಡೆಗಳು ಮಾದಕವಸ್ತು ಸಾಗಿಸುತ್ತಿದ್ದ ದೋಣಿಯ ಮೇಲೆ ಗುಂಡು ಹಾರಿಸಿವೆ ಎಂದ ಅವರು, ಆ ದೋಣಿಯಲ್ಲಿ ಬಹಳಷ್ಟು ಮಾದಕವಸ್ತುಗಳಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷರು ತಮ್ಮ ಟ್ರುತ್ ಸೋಷಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ಬೆಳಗ್ಗೆ, ನನ್ನ ಆದೇಶದ ಮೇರೆಗೆ, ಸೌತ್‌ಕಾಮ್ ಜವಾಬ್ದಾರಿಯುತ ಪ್ರದೇಶದಲ್ಲಿ ಸಕಾರಾತ್ಮಕವಾಗಿ ಗುರುತಿಸಲ್ಪಟ್ಟ ಟ್ರೆನ್ ಡಿ ಅರಾಗುವಾ ಮಾದಕವಸ್ತು ಭಯೋತ್ಪಾದಕರ ವಿರುದ್ಧ ಅಮೆರಿಕದ ಮಿಲಿಟರಿ ಪಡೆಗಳು ಅತ್ಯುಂತ ನಿಖರ ದಾಳಿಯನ್ನು ನಡೆಸಿದವು. ಈ ದಾಳಿಯ ಪರಿಣಾಮವಾಗಿ 11 ಭಯೋತ್ಪಾದಕರು ಕೊಲ್ಲಲ್ಪಟ್ಟರು. ಅಮೆರಿಕ ಪಡೆಗಳಿಗೆ ಈ ಕಾರ್ಯಾಚರಣೆಯಲ್ಲಿ ಯಾವುದೇ ಹಾನಿಯಾಗಿಲ್ಲ. ದಯವಿಟ್ಟು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಕ್ಕೆ ಮಾದಕವಸ್ತುಗಳನ್ನು ತರುವ ಬಗ್ಗೆ ಯೋಚಿಸುತ್ತಿರುವ ಯಾರಿಗಾದರೂ ಇದು ಎಚ್ಚರಿಕೆಯಾಗಿದೆ.. ಹುಷಾರಾಗಿ ! ಎಂದು ಅವರು ವಾರ್ನಿಂಗ್ ಕೊಟ್ಟಿದ್ದಾರೆ.
ಮತ್ತೊಂದು ಕಡೆ ಎಕ್ಸ್ ಪೋಸ್ಟ್ ಮಾಡಿರುವ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇಂದು ಅಮೆರಿಕ ಸೇನೆ ವೆನೆಜುವೆಲಾದಿಂದ ಹೊರಟು ಗೊತ್ತುಪಡಿಸಿದ ಮಾದಕವಸ್ತು-ಭಯೋತ್ಪಾದಕ ಸಂಘಟನೆಯಿಂದ ನಿರ್ವಹಿಸಲ್ಪಡುತ್ತಿದ್ದ ಮಾದಕವಸ್ತು ಹಡಗಿನ ವಿರುದ್ಧ ದಕ್ಷಿಣ ಕೆರಿಬಿಯನ್‌ನಲ್ಲಿ ಮಾರಕ ದಾಳಿ ನಡೆಸಿದೆ ಎಂದು ದೃಢಪಡಿಸಿದ್ದರು. ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಟ್ರಂಪ್, ಮೆಕ್ಸಿಕೊ ಮತ್ತು ಲ್ಯಾಟಿನ್ ಅಮೆರಿಕದ ಇತರೆಡೆಗಳಲ್ಲಿ ಹಲವಾರು ಮಾದಕವಸ್ತು ಕಳ್ಳಸಾಗಣೆ ಸಂಸ್ಥೆಗಳು ಮತ್ತು ಕ್ರಿಮಿನಲ್ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಹೆಸರಿಸಿದೆ.
ಅವುಗಳಲ್ಲಿ ಟ್ರೆನ್ ಡಿ ಅರಾಗುವಾ ಮತ್ತು ವೆನೆಜುವೆಲಾದ ಮತ್ತೊಂದು ಗುಂಪು “ಕಾರ್ಟೆಲ್ ಆಫ್ ದಿ ಸನ್ಸ್” ಗಳೂ ಸೇರಿವೆ. ಇದನ್ನು ಅಧ್ಯಕ್ಷ ಮಡುರೊ ಮತ್ತು ಇತರ ಉನ್ನತ ಸರ್ಕಾರಿ ಅಧಿಕಾರಿಗಳು ನೇತೃತ್ವ ವಹಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.
ಹೆಚ್ಚುವರಿ ನೌಕಾ ಹಡಗುಗಳು ಮತ್ತು ಸಾವಿರಾರು ಯುಎಸ್ ಮೆರೈನ್‌ಗಳು ಮತ್ತು ನಾವಿಕರ ನಿಯೋಜನೆ ಸೇರಿದಂತೆ ಕಳೆದ ಎರಡು ತಿಂಗಳುಗಳಲ್ಲಿ ದಕ್ಷಿಣ ಕೆರಿಬಿಯನ್‌ನಲ್ಲಿ ತನ್ನ ಪಡೆಗಳನ್ನು ಬಲಪಡಿಸಲು ಯುಎಸ್ ಮಿಲಿಟರಿ ಮುಂದಾಗಿದೆ. ಟ್ರಂಪ್ ಆಡಳಿತವು ಯುಎಸ್‌ಗೆ ಮಾದಕವಸ್ತುಗಳ ಹರಿವನ್ನು ತಡೆಯಲು ಮಿಲಿಟರಿ ಕಾರ್ಯಾಚರಣೆ ಮಾಡುವುದಾಗಿ ಪದೇ ಪದೇ ಎಚ್ಚರಿಕೆ ರವಾನಿಸಿತ್ತು.