ಇತ್ತೀಚಿನ ಸುದ್ದಿ
Trending

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 10 ರ ವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಇಲಾಖೆ ತಿಳಿಸಿದೆ.

ಮಳೆ ಮುನ್ಸೂಚನೆ : ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಅಲ್ಲದೇ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ವಿಜಯಪುರ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್ ಹಾಗೂ ಬೆಳಗಾವಿ ಜಿಲ್ಲೆಗಳಲ್ಲೂ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ : ಬೆಂಗಳೂರು, ಗ್ರಾಮಾಂತರ, ಕೋಲಾರ, ಸುಳ್ಯ, ಸಿದ್ದಾಪುರ, ಮಂಗಳೂರು, ಆಗುಂಬೆ, ಮಂಕಿ, ಪುತ್ತೂರು, ಮಾಣಿ, ಧರ್ಮಸ್ಥಳ, ಬಂಟ್ವಾಳ, ಕಮ್ಮರಡಿ, ಕೊಪ್ಪ, ಕ್ಯಾಸಲ್​ರಾಕ್, ಉಪ್ಪಿನಂಗಡಿ, ಮೂಡುಬಿದಿರೆ, ಜಯಪುರ, ಗೇರುಸೊಪ್ಪ, ಉಡುಪಿ, ಶೃಂಗೇರಿ, ಸೋಮವಾರಪೇಟೆ, ಎನ್​​ಆರ್​​ಪುರ, ಮಾನ್ವಿ, ಮಂಗಳೂರು, ಲೋಂಡಾ, ಕೂಡ್ಲಿಗಿ, ಕೊಟ್ಟಿಗೆಹಾರ, ಕಾರ್ಕಳ, ಮುಲ್ಕಿ, ಕುಶಾಲನಗರ, ಕುಮಟಾ, ಕಳಸ, ಜೋಯ್ಡಾ, ಹಾರಂಗಿ, ಬಾಳೆಹೊನ್ನೂರು, ಅರಕಲಗೋಡು, ಸಿಂಧನೂರು, ಮುದಗಲ್, ಮುದ್ದೇಬಿಹಾಳ, ನಿಪ್ಪಾನಿ, ಕೊಟ್ಟೂರು, ಕೋಟಾ, ಕಂಪ್ಲಿ, ಇಳಕಲ್, ಹುಮ್ನಾಬಾದ್, ಹಗರಿಬೊಮ್ಮನಹಳ್ಳಿ, ಗೋಕರ್ಣ, ಗಂಗಾವತಿ, ಚಿತ್ರದುರ್ಗ, ಚಿಕ್ಕೋಡಿ ಹಾಗೂ ಬನವಾಸಿಯಲ್ಲಿ ಬುಧವಾರ ಹೆಚ್ಚಿನ ಮಳೆಯಾಗಿದೆ.

ರಾಜಧಾನಿಯಲ್ಲಿ ಹೇಗಿದೆ ವಾತಾವರಣ? : ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಇಂದು ಸಂಜೆ ವೇಳೆಗೆ ಮಳೆ ಬೀಳುವ ಸಾಧ್ಯತೆ ಇದೆ. ನಗರದಲ್ಲಿ 26.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್​​ಎಎಲ್​ನಲ್ಲಿ 27.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 27.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸೆಪ್ಟೆಂಬರ್​​ನಲ್ಲೂ ಅತ್ಯಧಿಕ ಮಳೆ: ದೇಶದ ಹಲವೆಡೆ ಸೆಪ್ಟೆಂಬರ್ ತಿಂಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇತ್ತೀಚೆಗೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ, ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ 167.9 ಮಿ.ಮೀ ಮಳೆಯಾಗುತ್ತದೆ. ಈ ಬಾರಿ, ಸಾಮಾನ್ಯಕ್ಕಿಂತ ಶೇ.109ರಷ್ಟು ಹೆಚ್ಚಿನ ಮಳೆಯಾಗುವ ಸೂಚನೆಗಳಿವೆ ಎಂದು ಇಲಾಖೆ ತಿಳಿಸಿತ್ತು.ಈಶಾನ್ಯ ಭಾರತ, ಪೂರ್ವ ಭಾರತ, ದಕ್ಷಿಣ ಭಾರತ ಮತ್ತು ವಾಯುವ್ಯ ಭಾರತದ ಅನೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ದೇಶದ ಉಳಿದ ಭಾಗಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದರು.

ಸೆಪ್ಟೆಂಬರ್‌ನಲ್ಲಿ ಉತ್ತರಾಖಂಡ, ದಕ್ಷಿಣ ಹರಿಯಾಣ, ದೆಹಲಿ ಮತ್ತು ಉತ್ತರ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದು ದಿಢೀರ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಬಹುದು. ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಬಹುದು. ಹೆಚ್ಚಿನ ನದಿಗಳು ಉತ್ತರಾಖಂಡದಲ್ಲಿ ಹುಟ್ಟಿಕೊಳ್ಳುತ್ತವೆ. ಭಾರೀ ಮಳೆಯಿಂದಾಗಿ, ಈ ನದಿಗಳು ಉಕ್ಕಿ ಹರಿಯಬಹುದು. ಹತ್ತಿರದ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರವಾಹ ಸೃಷ್ಟಿಯಾಗಲಿದೆ.

Related Articles

Leave a Reply

Your email address will not be published. Required fields are marked *

Back to top button