Country
Trending

ನೂತನ ಉಪ ರಾಷ್ಟ್ರಪತಿಯಾಗಿ ತಮಿಳುನಾಡಿನ ರಾಧಾಕೃಷ್ಣನ್ ಆಯ್ಕೆ

ಮಾಜಿ ಉಪ ರಾಷ್ಟ್ರಪತಿ ಜಗದೀಪ್​ ಧಂಖರ್​ ಅವರ ಉತ್ತರಾಧಿಕಾರಿಯಾಗಿ ನಿರೀಕ್ಷೆಯಂತೆ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಅವರು ಭರ್ಜರಿ ಜಯ ಗಳಿಸುವ ಮೂಲಕ ಉಪ ರಾಷ್ಟ್ರಪತಿಯಾಗಿ ಅಧಿಕಾರ ನಡೆಸಲಿದ್ದಾರೆ.

ಆಡಳಿತಾರೂಢ ಎನ್‌ಡಿಎ ಪರವಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮತ್ತು ವಿಪಕ್ಷಗಳ I.N.D.I.A ಕೂಟದಿಂದ ಸುಪ್ರೀಂಕೋರ್ಟ್​ನ​ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಅವರು ಕಣದಲ್ಲಿದ್ದರು.

ಸಂಸತ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮತದಾನ ಮಾಡಿದರು. ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಬಳಿಕ 6 ಗಂಟೆಗೆ ಮತ ಎಣಿಕೆ ಆರಂಭವಾಯಿತು.

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಇಂದು 767 ಮತಗಳು ಚಲಾವಣೆಯಾದವು. ಅದರಲ್ಲಿ 752 ಮತಗಳು ಮಾನ್ಯವಾದರೆ, 15 ಮತಗಳು ಅಮಾನ್ಯವಾಗಿವೆ. ಚಲಾವಣೆಯಾದ ಮತಗಳಲ್ಲಿ ಎನ್​ಡಿಎ ಅಭ್ಯರ್ಥಿ ರಾಧಾಕೃಷ್ಣನ್​ ಅವರಿಗೆ 452 ಮೊದಲ ಪ್ರಾಶಸ್ತ್ಯದ ಮತಗಳು ಬಂದರೆ, ವಿಪಕ್ಷಗಳ ಅಭ್ಯರ್ಥಿ ಸುದರ್ಶನ್​ ರೆಡ್ಡಿ ಅವರಿಗೆ ಕೇವಲ 300 ಮತಗಳು ಮಾತ್ರ ಬಿದ್ದಿವೆ. ಈ ಮೂಲಕ ಎನ್​ಡಿಎ ಅಭ್ಯರ್ಥಿ ಜಯ ಗಳಿಸಿದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಅಡ್ಡಮತದಾನ, ವಿಪಕ್ಷಗಳಿಗೆ ಮುಖಭಂಗ: ಬಹುಮತದ ಕೊರತೆ ಇದ್ದರೂ ನಿವೃತ್ತ ಜಡ್ಜ್​​ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದ ವಿಪಕ್ಷಗಳು ಅಡ್ಡಮತದಾನದ ಮೂಲಕ ಗೆಲುವಿನ ಆಸೆ ಹೊಂದಿದ್ದರು. ಆದರೆ, ಈ ಸೋಲಿನ ಮೂಲಕ ವಿಪಕ್ಷಗಳು ತೀವ್ರ ಮುಖಭಂಗ ಅನುಭವಿಸಿವೆ.

ಲೆಕ್ಕಾಚಾರದ ಪ್ರಕಾರ ವಿಪಕ್ಷ ಅಭ್ಯರ್ಥಿಗೆ 315 ಮತಗಳು ಬರಬೇಕಿತ್ತು. ಆದರೆ, 300 ಮತಗಳು ಬಂದಿದ್ದು, 15 ಮತಗಳು ಕುಲಗೆಟ್ಟಿವೆ. ಇವು ರಾಧಾಕೃಷ್ಣನ್​ ಅವರಿಗೆ ಬಂದಿವೆ ಎಂದು ಬಿಜೆಪಿ ಹೇಳಿದೆ.

ಆರ್​ಎಸ್​ಎಸ್​ ಕಟ್ಟಾಳುವಿಗೆ ಪಟ್ಟ: ತಮಿಳುನಾಡಿನ ಮೋದಿ ಎಂದೇ ಜನಜನಿತರಾಗಿರುವ ಚಂದ್ರಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್​ ಅವರು ದೇಶದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಆರ್​ಎಸ್​ಎಸ್​ ಸಿದ್ಧಾಂತದ ಕಟ್ಟಾಳುವಿಗೆ ದೇಶದ ಎರಡನೇ ಅತ್ಯುನ್ನತ ಹುದ್ದೆ ಧಕ್ಕಿದಂತಾಗಿದೆ.

ಸೋಲನ್ನು ವಿನಮ್ರತೆಯಿಂದ ಸ್ವೀಕರಿಸುವೆ: ಇತ್ತ ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ವಿಪಕ್ಷಗಳ ಅಭ್ಯರ್ಥಿ ನಿವೃತ್ತ ಜಡ್ಜ್​ ಸುದರ್ಶನ್​​ ರೆಡ್ಡಿ ಅವರು, ಫಲಿತಾಂಶ ನನ್ನ ಪರವಾಗಿಲ್ಲವಾದರೂ, ನಮ್ಮ ನಮ್ಮ ಮಹಾನ್ ಗಣರಾಜ್ಯದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅಚಲ ನಂಬಿಕೆಯೊಂದಿಗೆ ಸೋಲನ್ನು ನಾನು ವಿನಮ್ರವಾಗಿ ಸ್ವೀಕರಿಸುವೆ ಎಂದು ಹೇಳಿದರು.

ಫಲಿತಾಂಶ ಏನೇ ಆಗಲಿ, ಸೈದ್ಧಾಂತಿಕ ಹೋರಾಟವು ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಸುವೆ. ಪ್ರಜಾಪ್ರಭುತ್ವವು ಗೆಲುವಿನಿಂದ ಮಾತ್ರ ಬಲಗೊಳ್ಳುವುದಿಲ್ಲ. ಸಂವಾದ, ಭಿನ್ನಾಭಿಪ್ರಾಯ, ಭಾಗವಹಿಸುವಿಕೆಯೂ ಪ್ರಜಾಪ್ರಭುತ್ವದ ಬಲವಾಗಿದೆ ಎಂದು ಪರಾಜಿತ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ. ಉಪ ರಾಷ್ಟ್ರಪತಿಗಳಾಗಿ ಆಯ್ಕೆಯಾದ ಸಿ.ಪಿ.ರಾಧಾಕೃಷ್ಣನ್ ಅವರಿ ಶುಭ ಹಾರೈಸುವೆ ಎಂದು ಇದೇ ವೇಳೆ ಹೇಳಿದರು.

ಗಣ್ಯರಿಂದ ಅಭಿನಂದನೆ: ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ರಾಜಕೀಯ ಧುರೀಣರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button