ಇತ್ತೀಚಿನ ಸುದ್ದಿ
Trending

ಮದ್ದೂರಿನಲ್ಲಿ ಇಂದು ಸಾಮೂಹಿಕ ಗಣಪತಿ ವಿಸರ್ಜನೆ

ಕಲ್ಲು ತೂರಾಟದ ಬಳಿಕ ಶಾಂತ ಪರಿಸ್ಥಿತಿಗೆ ಮರಳುತ್ತಿರುವ ಜಿಲ್ಲೆಯ ಮದ್ದೂರಿನಲ್ಲಿ ಇಂದು ಸಾಮೂಹಿಕ ಗಣಪತಿ ವಿಸರ್ಜನೆ ಮಾಡಲಾಗುತ್ತಿದೆ. ಮೆರವಣಿಗೆಯಲ್ಲಿ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಭಾಗವಹಿಸಲಿದ್ದಾರೆ.

ಮೆರವಣಿಗೆ ಬೆಳಗ್ಗೆ 11 ಗಂಟೆಗೆ ಮದ್ದೂರಿನ ಪ್ರವಾಸಿ ಮಂದಿರದಿಂದ ಬಳಿಯಿಂದ ಆರಂಭವಾಗಿ, ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್​.ಅಶೋಕ್, ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ, ಶಾಸಕ ಅಶ್ವತ್ಥ ನಾರಾಯಣ ಹಾಗು ಜೆಡಿಎಸ್​ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಸೇರಿ ಹಲವು ಭಾಗವಹಿಸುವ ಸಾಧ್ಯತೆಯಿದೆ.

ಪೊಲೀಸ್​ ಬಿಗಿ ಭದ್ರತೆ: ಗಣೇಶ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ದ್ರೋಣ್ ಕ್ಯಾಮರಾ ಕಣ್ಗಾವಲು ಇರಲಿದೆ. ಭದ್ರತೆಗೆ 1 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆರ್​ಎಎಫ್,​​ ಅರೆಸೇನಾ ಪಡೆ ತುಕಡಿ ಕೂಡ ನಿಯೋಜನೆಗೊಂಡಿದೆ. ‌ಈಗಾಗಲೇ ಪಟ್ಟಣದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಪೊಲೀಸರು ಪಥಸಂಚಲನ ನಡೆಸಿದ್ದಾರೆ.

ಭಾನುವಾರ (ಸೆ.7) ರಾತ್ರಿ ಗಣೇಶ ವಿಸರ್ಜನೆಯ ವೇಳೆ ಮದ್ದೂರು ಪಟ್ಟಣದಲ್ಲಿ ಕಲ್ಲು ತೂರಾಟ ನಡೆದಿತ್ತು. ಈ ಸಂಬಂಧ ಈಗಾಗಲೇ 22 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಪೊಲೀಸರೂ ಸಹ ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದರು.

ಮದ್ದೂರು ಬಂದ್: ಮಂಗಳವಾರ ಮದ್ದೂರು ಬಂದ್​ಗೆ ಕರೆ ನೀಡಲಾಗಿತ್ತು. ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದು, ಪಟ್ಟಣ ಸ್ತಬ್ಧವಾಗಿತ್ತು. ರಸ್ತೆಗಳು ಜನ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿದ್ದವು. ಮದ್ದೂರಿನ ಕೆ.ಎಂ.ದೊಡ್ಡಿ, ಬೆಸಗರಹಳ್ಳಿ, ಕೆಸ್ತೂರು ಸೇರಿದಂತೆ ಹೋಬಳಿ ಕೇಂದ್ರಗಳಲ್ಲೂ ಸಹ ಬಂದ್​ಗೆ ಬೆಂಬಲ ವ್ಯಕ್ತವಾಗಿತ್ತು. ಹಿಂದೂ ಪರ ಸಂಘಟನೆಗಳು ನೀಡಿದ್ದ ಬಂದ್​ಗೆ ಬಿಜೆಪಿ ಕೂಡ ಬೆಂಬಲ ಸೂಚಿಸಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಐಜಿಪಿ ಮಾಹಿತಿ: ”ಮದ್ದೂರಿನಲ್ಲಿ ಭಾನುವಾರ ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿದೆ. ಆ ವೇಳೆ ಗುಂಪು ಘರ್ಷಣೆಯಾಗಿದ್ದು, ಅದನ್ನು ಸರಿಪಡಿಸಿ ಮೆರವಣಿಗೆ ಕಳುಹಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಬಂದೋಬಸ್ತ್ ಕಲ್ಪಿಸಲಾಗಿದೆ. 7 ಎಸ್​ಪಿ, ಮೂರು ಎಎಸ್​ಪಿ, 600 ಪೊಲೀಸರು ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ರಾತ್ರಿ ವೇಳೆ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಬುಧವಾರ ಸಾಮೂಹಿಕ ಗಣೇಶ ಮೂರ್ತಿ ನಿಮಜ್ಜನ ಇದ್ದು, ವಿಶೇಷ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆಳಗ್ಗೆವರೆಗೂ 144 ಸೆಕ್ಷನ್ ಜಾರಿ ಇದೆ. 22 ಆರೋಪಿಗಳು ಅರೆಸ್ಟ್ ಮಾಡಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಐಜಿಪಿ ಬೋರಲಿಂಗಯ್ಯ ಮಂಗಳವಾರ ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button