ಕ್ರೈಂ
Trending

ಪತ್ನಿ, ಪುತ್ರನ ಎದುರೇ ಕರ್ನಾಟಕದ ವ್ಯಕ್ತಿಯ ಶಿರಚ್ಛೇದಿಸಿ ಬರ್ಬರ ಹತ್ಯೆ

ವಾಷಿಂಗ್ ಮೆಷಿನ್ ವಿಚಾರಕ್ಕಾಗಿ ಜಗಳ ನಡೆದು ಅಮೆರಿಕದ ಟೆಕ್ಸಾಸ್‌ನಲ್ಲಿ 50 ವರ್ಷದ ಕರ್ನಾಟಕ ಮೂಲದ ಮೋಟೆಲ್ ಮ್ಯಾನೇಜರ್ ಓರ್ವರನ್ನು ಅವರ ಪತ್ನಿ ಮತ್ತು ಪುತ್ರನ ಎದುರೇ ಶಿರಚ್ಛೇದಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಲ್ಲಾಸ್‌ನ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆಯಿತು.

ಚಂದ್ರ ಮೌಳಿ ‘ಬಾಬ್’ ನಾಗಮಲ್ಲಯ್ಯ(50) ಎಂಬವರು ತಮ್ಮ ಸಹೋದ್ಯೋಗಿ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ ಎಂಬಾತನಿಂದ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಮುರಿದು ಹೋದ ವಾಷಿಂಗ್ ಮಷಿನ್ ವಿಚಾರವಾಗಿ ಆರೋಪಿ ಮತ್ತು ನಾಗಮಲ್ಲಯ್ಯ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ಆರೋಪಿ, ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಡಲ್ಲಾಸ್ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಸೆರೆಯಾದ ದೃಶ್ಯಾವಳಿಗಳಲ್ಲಿ ಕೋಬೋಸ್-ಮಾರ್ಟಿನೆಜ್ ಮಚ್ಚು ಹೊರತೆಗೆದು ನಾಗಮಲ್ಲಯ್ಯನವರ ಮೇಲೆ ಸತತವಾಗಿ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಗಾಯಗೊಂಡ ನಾಗಮಲ್ಲಯ್ಯ ಅವರು ಪತ್ನಿ ಮತ್ತು 18 ವರ್ಷದ ಪುತ್ರನಿದ್ದ ಮೋಟೆಲ್ ಕಚೇರಿಯತ್ತ ಓಡಿಹೋಗಿದ್ದಾರೆ. ಆದರೆ ಆರೋಪಿ ಅವರನ್ನು ಹಿಂಬಾಲಿಸಿ, ನಿರಂತರವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸ್ನೇಹಿತರು ಮತ್ತು ತಮ್ಮ ಕುಟುಂಬಕ್ಕೆ ನಾಗಮಲ್ಲಯ್ಯ ಬಾಬ್ ಎಂದೇ ಚಿರಪರಿಚಿತರು. ಓರ್ವ ಪ್ರೀತಿಯ ಪತಿ, ಜವಾಬ್ದಾರಿಯುತ ತಂದೆ ಮತ್ತು ಸ್ಫೂರ್ತಿಯ ವ್ಯಕ್ತಿತ್ವ ನಾಗಮಲ್ಲಯ್ಯ ಅವರದಾಗಿತ್ತು ಎಂದು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

“ಇಂಥ ಘಟನೆಯನ್ನು ಊಹಿಸಲು ಕೂಡಾ ಸಾಧ್ಯವಿಲ್ಲ. ಅತ್ಯಂತ ಆಘಾತಕಾರಿ. ಬಾಬ್ ಅವರನ್ನು ಅವರ ಪತ್ನಿ ಮತ್ತು ಮಗನ ಮುಂದೆಯೇ ಕ್ರೂರವಾಗಿ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಈ ಘಟನೆಯ ಸ್ವರೂಪ ನಮ್ಮ ಸಮುದಾಯವನ್ನು ಬೆಚ್ಚಿಬೀಳಿಸಿದೆ” ಎಂದು ಓರ್ವ ಸ್ನೇಹಿತರು ಕಳವಳ ವ್ಯಕ್ತಪಡಿಸಿದರು.

ಆರೋಪಿಯ ವಿರುದ್ಧ ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆ ಪ್ರಕರಣಗಳಿವೆ. ಇದೀಗ ಮತ್ತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆ ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

ಅಂತ್ಯಕ್ರಿಯೆ, ತಕ್ಷಣದ ಜೀವನ ವೆಚ್ಚಗಳು ಮತ್ತು ಮಗನ ಕಾಲೇಜು ಶಿಕ್ಷಣಕ್ಕಾಗಿ ಸಮುದಾಯ ನಿಧಿ ಸಂಗ್ರಹಿಸಲು ಮುಂದಾಗಿದೆ. ನಾಗಮಲ್ಲಯ್ಯ ಅವರ ಮೃತದೇಹದ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button